ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಮಹಿಳಾ ಸಂಘಗಳು ಶ್ರಮಿಸಿ: ಜಸ್ಟೀಸ್ ಪವನ್‌ಕುಮಾರ್ ಭಜಂತ್ರಿ

WhatsApp
Telegram
Facebook
Twitter
LinkedIn

ಬೆಂಗಳೂರು: ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಪೋಷಕರು ಮತ್ತು ಮಹಿಳಾ ಸಂಘಟನೆಗಳು ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಪಾಟ್ನಾ ಉಚ್ಛ ನ್ಯಾಯಾಲಯದ ನಿವೃತ ಮುಖ್ಯ ನ್ಯಾಯಾಧೀಶ ಜಸ್ಟೀಸ್ ಪವನ್‌ಕುಮಾರ್ ಭಜಂತ್ರಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯಮಟ್ಟದ ಬೃಹತ್ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಂಘಟನೆಗಳು ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಫ್ರೀ ಕೋಚಿಂಗ್ ಶಿಬಿರಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ಯೋಜನೆಗಳ ಕುರಿತು ಮಹಿಳೆಯರಿಗೆ ಅರಿವು ಇರುವುದಿಲ್ಲ. ಆದ್ದರಿಂದ ಮಹಿಳಾ ಸಂಘಟನೆಗಳು ತಮ್ಮ ವೆಬ್‌ಸೈಟ್‌ನಲ್ಲಿ ಮಹಿಳಾ ಸಬಲೀಕರಣ ಯೋಜನೆಗಳ ಮಾಹಿತಿ ಹಂಚಿಕೊಳ್ಳಬೇಕು. ಜತೆಗೆ ಪ್ರತಿವರ್ಷ ಸೌಲಭ್ಯ ಪಡೆದ ಮಹಿಳೆಯರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದರ ಜತೆಗೆ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ಮಹಿಳಾ ಸಂಘಗಳು ಕೆಲಸ ಮಾಡಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಿವಿಲ್ ಜಡ್ಜ್ ಹುದ್ದೆ ಭರ್ತಿಗೆ ಪರಿಶಿಷ್ಟ ಸಮುದಾಯದ ಯುವ ವಕೀಲರಿಗೆ ಮೂರು ತಿಂಗಳ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಅಂದಿನ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಜಾರಿಗೆ ತಂದಿದ್ದರು. ಬಳಿಕ ಅದನ್ನು ಪುನಃ ಆರಂಭಿಸಲಿಲ್ಲ. ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜನ ನೀಡಬೇಕು ಎಂದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಮಾತನಾಡಿ, ಯಾರಿಗೆ ಅಧಿಕಾರ ವಂಚಿತ, ಶೋಷಿತರಾಗುತ್ತಾರೋ ಅವರೇ ಅಲ್ಪಸಂಖ್ಯಾತರಾಗಿದ್ದಾರೆ. ಬಹುತೇಕ ಕಾರ್ಯಕ್ರಮಗಳಲ್ಲಿ ಹೆಣ್ಣು ಮಕ್ಕಳನ್ನು ವೇದಿಕೆ ಹಂಚಿಕೊಳ್ಳಲು ಬಿಡುವುದಿಲ್ಲ. ಅವರನ್ನು ಕೇವಲ ಸ್ವಾಗತ, ವಂದಾನರ್ಪಣೆ ಮಾಡಲು, ಹೂಗುಚ್ಚ ನೀಡಲು ಮಾತ್ರ ಮಹಿಳೆಯರನ್ನು ಬಳಸುಕೊಳ್ಳಲಾಗುತ್ತದೆ. ಅವರಿಗೆ ತಮ್ಮ ಹಿತನುಡಿಗಳನ್ನು ಹಂಚಿಕೊಳ್ಳಲು ಮೈಕ್ ಕೂಡಾ ಕೊಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿ ಜಿಲ್ಲೆಯಲ್ಲಿ ಪ್ತವಾಸ ಮಾಡುವಾಗ ನಾನು ಅಲೆಮಾರಿ ಜನಾಂಗವನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ, ಅವರುಗಳಿಗೆ ಸೂಕ್ತ ನಿವೇಶನ  ಮನೆಗಳನ್ನು ನಿರ್ಮಾಣ ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಶೋಷಿತ ಸಮುದಾಯದ ಮಕ್ಕಳು ಶಿಕ್ಷಿತರಾಗಬೇಕು. ಮಹಿಳಾ ಸಂಘಟನೆಗಳು ತಮ್ಮ ಅಹವಾಲುಗಳನ್ನು ಸಲ್ಲಿಸಲು ಮಹಿಳಾ ಆಯೋಗಕ್ಕೆ ಬರಬಹುದು. ಸದಾ ಬಾಗಿಲು ತೆರೆದಿರುತ್ತದೆ. ಪ್ರತಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಬಂದು ತಮ್ಮ ಸಮಸ್ಯೆಗಳನ್ನು ಸಲ್ಲಿಸಬಹುದು. ನಿಮ್ಮ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ  ಮತ್ತು ಸಚಿವರಿಗೆ ಪತ್ರ ಬರೆದು ನಾನು ಸಮಸ್ಯೆ ಬಗೆಹರಿಸುತ್ತೇನೆ. ಇನ್ನು 112 ಪೊಲೀಸ್ ಸಹಾಯವಾಣಿ ಸಂಖ್ಯೆ ಮತ್ತು 181 ಮಹಿಳಾ ಸಹಾಯವಾಣಿಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಗ್ರಾಮಗಳಲ್ಲಿ ಪ್ರತ್ಯೇಕವಾದ ಕೇರಿಗಳಿರುವ ಹಾಗೆ ನಮ್ಮಲ್ಲಿ ಕೀಳರಿಮೆ ಬೇಡ. ನಮ್ಮಲ್ಲಿ ಒಗ್ಗಟ್ಟು ಇರಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರ ವಿರುದ್ಧ ಹೋರಾಟ ಮಾಡಲು ಸಂಘಟನೆ ಮಾಡುವುದರ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಸದಾ ಹುಮ್ಮಸ್ಸಿನಿಂದ ನಾಗಮ್ಮ ಕೆಲಸ ಮಾಡುತ್ತಿದ್ದಾರೆ. ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಆರ್ಥಿಕತೆಯ ಅವಶ್ಯಕತೆ ಇದ್ದು, ಎಲ್ಲದಕ್ಕೂ ಪುರುಷರನ್ನು ಕೇಳುವುದಕ್ಕೆ ಆಗುವುದಿಲ್ಲ ಎಂದರು.

ಮಹಿಳೆಯರೇ ಸಂಘದ ಸದಸ್ಯತ್ವವನ್ನು ಪಡೆಯುವ ಮೂಲಕ ಹಣವನ್ನು ಸಂಘಟನೆಗೆ ಜಮೆ ಮಾಡಬೇಕು. ಆ ನಿಟ್ಟಿನಲ್ಲಿ ಮಹಿಳೆಯರು ಜಿಲ್ಲಾ ಮಟ್ಟದಲ್ಲಿ ಅದನ್ನು ಸಕ್ರಿಯವಾಗಿ ಸದಸ್ಯತ್ವವನ್ನು ಮಾಡಿಸಬೇಕು. ಮೊದಲ ಕಾರ್ಯಕ್ರಮಕ್ಕೆ ಸುಮಾರು ಹತ್ತು ಲಕ್ಷ ಹಣವನ್ನು ವ್ಯಯ ಮಾಡುವುದು ವ್ಯರ್ಥ ಎನ್ನುವುದು ನನ್ನ ಭಾವನೆ. ಈ ನಿಟ್ಟಿನಲ್ಲಿ ಮೊದಲು ಸಂಘಟನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಯಾವುದೇ ಸಮುದಾಯಕ್ಕೆ ಸೇರಿದ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಬೆದರಿಕೆ ಪ್ರಕರಣಗಳಲ್ಲಿ ಸಿಲುಕಿದ ಮಹಿಳೆಯರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತ ಬೇಕು. ಆ ನಿಟ್ಟಿನಲ್ಲಿ ಸಂಘಟನೆ ಗ್ರಾಮ ಮಟ್ಟದಲ್ಲಿಯೂ ಕೆಲಸ ಮಾಡಬೇಕು. ಮಹಿಳೆಯರು ಸಂಘಟನೆ ಮಾಡುವ ಕಿಚ್ಚು, ಆಸಕ್ತಿ ವಹಿಸಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಹೆಣ್ಣುಮಕ್ಕಳನ್ನು ಸಂಕಷ್ಟಗಳ ಸಂಕೋಲೆಯಿಂದ ಬಿಡಿಸಲು ಸಂಘಟನೆ ಕೆಲಸ ಮಾಡಬೇಕು, ಆ ನಿಟ್ಟಿನಲ್ಲಿ ವಿಮೋಚನೆ ಹೊಂದಬೇಕು ಎಂದರು.

ಸಮಾಜದಲ್ಲಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು, ಮತ್ತಷ್ಟು ಕಾರ್ಯಕ್ರಮಗಳನ್ನು ಮಹಿಳೆಯರ ಸಬಲೀಕರಣಕ್ಕಾಗಿ ಮಾಡಬೇಕು. ಅದನ್ನು ಬಿಟ್ಟು ಸಮಾರಂಭಕ್ಕೆ ಬಂದು ಕೂತು ಎದ್ದು ಹೋದರೆ ಆಗುವುದಿಲ್ಲ. ಸಭೆಯಲ್ಲಿ ಹಿರಿಯರು ಹೇಳಿದ ಮಾತುಗಳನ್ನು ನೆನಪಿಟ್ಟುಕೊಂಡು ಕೆಲಸ ಮಾಡಬೇಕು. ಪ್ರತಿ ತಾಲೂಕಿನಲ್ಲಿ ಸಹಕಾರ ಸಂಘ ಪ್ರಾರಂಭಿಸಬೇಕು. ಅದರ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ಆ ನಿಟ್ಟಿನಲ್ಲಿ ಸಂಘಗಳು ಸಕ್ರಿಯವಾಗಬೇಕು. ಇಂದು ನಮ್ಮ ಜನರು ಗ್ರಾಮಗಳಲ್ಲಿ ಮದುವೆ ಕಾರ್ಯಕ್ರಮ ಮಾಡದೆ, ನಗರದ ಚೌಟರಿಗಳಲ್ಲಿ ಹೆಚ್ಚಾಗಿ ಮಾಡುತ್ತಿದ್ದಾರೆ. ನಾನು ನಮ್ಮ ತಾಲೂಕಿನಲ್ಲಿ ಪ್ರತಿ ವರ್ಷ ಏಪ್ರಿಲ್ ನಲ್ಲಿ ಸರಳ ವಿವಾಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದೇನೆ ಎಂದರು.

ಬಾಬಾ ಸಾಹೇಬರ ಸಂವಿಧಾನದ ಮೀಸಲಾತಿ ಅಡಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಯುವಕರು ಸಂಘಕ್ಕೆ ಪ್ರತಿ ವರ್ಷ ಐದು ಸಾವಿರ ಹಣವನ್ನು ನೀಡಬೇಕು. ನಮ್ಮ ಶ್ರೀಮಂತಿಕೆ ದೊಡ್ಡ ಬಂಗಲೆ ಕಟ್ಟುವುದರ ಮೂಲಕ ಅಲ್ಲ, ಬದಲಾಗಿ ನಮ್ಮ ಮನೆಯ ಮಕ್ಕಳು ಪ್ರತಿಯೊಬ್ಬರು ಶಿಕ್ಷಣ ಪಡೆಯುವಂತೆ ಮಾಡಬೇಕು. ಆ ನಿಟ್ಟಿನಲ್ಲಿ ಉನ್ನತ್ತ ಶಿಕ್ಷಣ ಪಡೆಯುವುದರ ಮೂಲಕ  ದೊಡ್ಡ ಹುದ್ದೆಗಳನ್ನು ಪಡೆದಾಗ ಮಾತ್ರ ನಮ್ಮ ಸಮಾಜ ಮುಂದೆ ಬರಲು ಸಾಧ್ಯ. ಶಿಕ್ಷಣಕ್ಕೆ, ಸಂಘಟನೆಗೆ ಒತ್ತು ನೀಡಬೇಕು, ಅನ್ಯಾಯದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕಿ ಡಾ.ಭೀಮಪುತ್ರಿ ನಾಗಮ್ಮ ಮಹಾದೇವ, ಪಾರ್ವತಿ ಶ್ರೀರಾಮ್, ನಾಗರಾಜ್ ಭಜಂತ್ರಿ, ತಾರಾ, ಸಿದ್ದಪ್ಪಾಜಿ ಸೇರಿದಂತೆ ಮತ್ತಿತರರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon