ಬೆಂಗಳೂರು: ರಾಮನಗರದಲ್ಲಿ ಅಕ್ರಮವಾಗಿ 10 ಬಾಂಗ್ಲಾದೇಶಿ ಮುಸಲ್ಮಾನರು ನೆಲೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ ಹೇಳಿಕೆ ನೀಡಿರುವುದು ಜೆಡಿಎಸ್ ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಐಕ್ಯತಾ ಒಕ್ಕೂಟದ ರಾಜ್ಯಾಧ್ಯಕ್ಷ ಮುಜಾಹಿದ್ ಅಲಿಬಾಬ ಅವರು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006 ರ ಸಂದರ್ಭದಲ್ಲಿ ಅಧಿಕಾರ ಹಂಚಿಕೆಯ ವೇಳೆ ಪಕ್ಷಕ್ಕೆ ಕೆಟ್ಟ ಪರಿಣಾಮವಾಗುತ್ತದೆ ಎನ್ನುವ ಆತಂಕದ ಹಿನ್ನಲೆಯಲ್ಲಿ ಬಿಜೆಪಿಗೆ 20 ತಿಂಗಳ ಅಧಿಕಾರವನ್ನು ಬಿಟ್ಟುಕೊಟ್ಟಿರಲಿಲ್ಲ. ಆಗ ಮುಸಲ್ಮಾರನಿಂದಲೇ ನಾನು ಮುಖ್ಯಮಂತ್ರಿ ಆಗಿರುವುದು ಎನ್ನುವ ಹೇಳಿಕೆಯನ್ನು ಸಹ ನೀಡಿದ್ದರು, ಆದರೆ ಆರ್.ಎಸ್.ಎಸ್ ಮತ್ತು ಬಿಜೆಪಿಯ ಪ್ರಭಾವಕ್ಕೆ ಒಳಗಾಗಿ ರಾಮನಗರದಲ್ಲಿ ಎಸ್.ಐ.ಆರ್ ಪ್ರಕ್ರಿಯೆಯ ವೇಳೆ ಬಾಂಗ್ಲಾದೇಶಗರನ್ನು ಸೇರಿಸಿಕೊಳ್ಳುತ್ತಿರುವಂತೆ ಹೇಳಿಕೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಗೃಹ ಸಚಿವರ ನಿಲುವು ಪ್ರಶಂಸನೀಯ:
ಆರ್.ಎಸ್.ಎಸ್ ನೋಂದಣಿಯ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ರಮ ಅತ್ಯಂತ ಶ್ಲಾಘನೀಯ. ಅದರ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರನ್ನು ನೋಂದಣಿಯ ಕುರಿತು ಯಾವ ಮುಖಂಡರೂ ಸಹಿತ ಪ್ರಶ್ನೆ ಮಾಡಿರಲಿಲ್ಲ. ಆದರೆ ಗೃಹ ಸಚಿವರು ಇಂತಹ ನಿಲುವನ್ನು ಕೈಗೊಂಡಿರುವುದು ಪ್ರಶಂಸನೀಯ ಎಂದರು.
ರಹೀಂ ಖಾನ್ ಬಾಲಿಶ ಹೇಳಿಕೆ ಖಂಡನೀಯ:
ಬೀದರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಹೀಂ ಖಾನ್ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಸಚಿವ ಈಶ್ವರ್ ಖಂಡ್ರೆ ಅವರುಗಳನ್ನು ದೇವರಿಗೆ ಹೋಲಿಸಿ ಮಾತನಾಡಿರುವುದು ಸರಿಯಲ್ಲ. ಅಧಿಕಾರಕ್ಕೋಸ್ಕರ ಇಂತಹ ಬಾಲಿಶ ಮಾತನ್ನು ಆಡಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳದ್ದು ತಪ್ಪಿಲ್ಲ:
ಕಲಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕಿ ಖನೀಜ್ ಫಾತಿಮಾ ಅವರ ಕೈ ಹಿಡಿದು ವಿಜಯೋತ್ಸವ ರೀತಿಯಲ್ಲಿ ತೋರಿಸಿರುವುದು ಸರಿಯಲ್ಲ. ಇದಕ್ಕೆ ಸಾರ್ವಜನಿಕವಾಗಿ ಅಕ್ಷೇಪ ವ್ಯಕ್ತವಾಗಿದೆ. ಸ್ಥಳದಲ್ಲಿಯೇ ಉಪಸ್ಥಿತರಿದ್ದ ಮುಸ್ಲಿಂ ಧರ್ಮಗುರುಗಳು ಮುನ್ನೆಚ್ಚರಿಕೆ ವಹಿಸಬೇಕಿತ್ತು. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.
ಶೀಘ್ರದಲ್ಲಿ ಸಂಪುಟ ವಿಸ್ತರಣೆ ಆಗಬೇಕು:
ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ವಿಚಾರದಲ್ಲಿ ವಿಳಂಬ ತೋರುತ್ತಿರುವುದು ಸರಿಯಲ್ಲ. ಹೊಸ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದಿದ್ದು, ಬಾಕಿ ಇರುವ ಸಚಿವ ಸ್ಥಾನಗಳನ್ನು ಶೀಘ್ರದಲ್ಲೇ ಭರ್ತಿ ಮಾಡಿದರೆ ಒಳ್ಳೆಯದಾಗಲಿದೆ. ಕಾಲಾವಧಿ ಕೂಡ ಕಡಿಮೆ ಇರುವುದರಿಂದ ವಿಸ್ತರಣೆ ಮಾಡುವುದು ಅಗತ್ಯವಾಗಿದೆ. ವಿಶೇಷವಾಗಿ ಮುಂಬೈ ಕರ್ನಾಟಕ ಭಾಗದಿಂದ ಹಿರಿಯ ಮುಸ್ಲಿಂ ಮುಖಂಡರಾದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಹಾಗೂ ದಕ್ಷಿಣ ಕರ್ನಾಟಕ ಭಾಗದಿಂದ ರಿಜ್ವಾನ್ ಅರ್ಷದ್ ಅವರುಗಳನ್ನು ಸಚಿವರನ್ನಾಗಿ ನೇಮಕ ಮಾಡಬೇಕು ಇದರಿಂದ ಮುಂದಿನ ದಿನಗಳಲ್ಲಿ ಒಳಿತಾಗಲಿದೆ. ಇಬ್ಬರೂ ವಿದ್ಯಾವಂತರಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಕೂಡ ನಿಷ್ಠಾವಂತರಾಗಿ ದುಡಿದಿರುವುದನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.















