ಖಾನಾಪುರ: ಸರ್ಕಾರದ ಒಂದಿಂಚೂ ಜಮೀನನ್ನು ಬಿಟ್ಟು ಕೊಡುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ವಿಧಾನಸೌಧದಲ್ಲಿ ಗುಡುಗುತ್ತಾರಾದರೂ ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ಭೂಪರಿವರ್ತನೆ ಮಾಡಿ ಲೇಔಟ್ ನಿರ್ಮಾಣದ ಅಕ್ರಮ ಚಟುವಟಿಕೆಗಳು ಖಾನಾಪುರ ತಾಲೂಕಿನಲ್ಲಿ ಮಿತಿಮೀರಿ ನಡೆಯುತ್ತಿವೆ. ತಮಗೇನೂ ಗೊತ್ತೇ ಇಲ್ಲ ಎನ್ನುವಂತೆ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದಂತೂ ಕಂದಾಯ ಸಚಿವರ ಮಾತಿಗೆ ಕವಡೆ ಕಾಸು ಕಿಮ್ಮತ್ತಿಲ್ಲ ಎನ್ನುವಂತಿದೆ.
ನೇರವಾಗಿ ನೋಡುವುದಾದರೆ, ಪತ್ರಿಕೆಗೆ ಸಿಕ್ಕಿರುವ ನಂಬಲರ್ಹ ಮಾಹಿತಿಯ ಪ್ರಕಾರ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಭೂಪರಿವರ್ತನೆಯ ಕಣ್ಣಿಗೆ ಕಟ್ಟುವಂತಿದೆ. ಜಾಂಬೋಟಿ ಗ್ರಾಮ ವ್ಯಾಪ್ತಿಯ ಮಂಗೇಶ ಅರುಣ ಚೌಗುಲೆ ಇವರ ಮಾಲೆಕತ್ವದಲ್ಲಿರುವ ಸ್ವತ್ತಿನ ಸಂಖ್ಯೆಯಾದ 133 ರ ಸುಮಾರು 10 ಎಕರೆ ಕೃಷಿ ಭೂಮಿಯನ್ನು ಸಂಪೂರ್ಣ ಪ್ಲಾಟ್ ಗಳಾಗಿ ಪರಿವರ್ತಿಸಿ ಸಾರ್ವಜನಿಕರಿಗೆ ಮಾರಲಾಗಿದೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ ಕೆಜಿಪಿ ಮತ್ತು ಲೇಔಟ್ ಮಾಡುವುದು ಕಡ್ಡಾಯವಾಗಿದ್ದು, ಆದರೆ ಇಂಥಹ ಅಕ್ರಮ ಲೇಔಟ್ ಮಾಡುವ ಕುಳಗಳು ಗ್ರಾಪಂ ಪಿಡಿಒ ಮತ್ತು ಇತರ ಸಿಬ್ಬಂದಿಗಳ ಸಹಾಯದಿಂದ ಕೆಜಿಪಿ ಇಲ್ಲದೆಯೇ ಇ-ಸ್ವತ್ತು ಉತಾರ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ನಿಯಮ ಪಾಲಿಸದೆ ಲೇಔಟ್ ಮಾಡಿಕೊಳ್ಳುತ್ತಾರೆ. ಹೀಗೆ ಕೆಜಿಪಿ ಮಾಡಿಸದೆ ಲೇಔಟ್ ಮಾಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಲಾಸ್ ಆಗುತ್ತಿದೆ.
ಇಲ್ಲಿ ನಾವು ತಿಳಿಸಲು ಹೊರಟಿರುವುದು ಇದೊಂದೇ ಪ್ರಕರಣವಲ್ಲ. ಜಿಲ್ಲಾದ್ಯಂತ ಇದೇ ರೀತಿ ನೂರಾರು ಲೇಔಟ್ ಗಳನ್ನು ಮಾಡಲಾಗುತ್ತಿದೆ. ಅದರಲ್ಲೂ ನಗರಕ್ಕೆ ಹೊಂದಿಕೊಂಡಿರುವ ಗ್ರಾಪಂ ವ್ಯಾಪ್ತಿಗಳಲ್ಲಿ ಇಂಥ ಅಕ್ರಮ ಚಟುವಟಿಕೆ ಜೋರಾಗಿ ನಡೆಯುತ್ತಿದೆ. ಇದೆಲ್ಲವೂ ರಾಜಾರೋಷವಾಗಿ ನಡೆಯುತ್ತಿದ್ದರೂ, ಪ್ರತಿದಿನ ನೂರಾರು ಕೋಟಿ ರೂಪಾಯಿ ಸರ್ಕಾರಕ್ಕೆ ಆದಾಯ ಖೋತಾ ಆಗುತ್ತಿದ್ದರೂ ಜಿಲ್ಲಾಧಿಕಾರಿಯವರು, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು, ಆಯಾ ತಹಶೀಲ್ದಾರರು, ಆಯಾ ಭೂಮಾಪನ ಇಲಾಖೆ ಅಧಿಕಾರಿಗಳು ಸುಮ್ಮನಿರುವುದು ಏಕೆ ಎನ್ನುವುದು ಜನರ ಪ್ರಶ್ನೆಯಾಗಿದೆ.
ಇಂಥ ಅಕ್ರಮಗಳ ಬಗ್ಗೆ ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಕಂದಾಯ ಇಲಾಖೆ ಸಚಿವರಾದ ಕೃಷ್ಣ ಬೈರೇಗೌಡರು, ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ತಕ್ಷಣ ಕಾರ್ಯೋನ್ಮುಖರಾಗಿ ಈ ಅಕ್ರಮಗಳನ್ನು ತಡೆಯಬೇಕಿದೆ. ಇದಲ್ಲದೆ ಲೋಕಾಯುಕ್ತ ಅಧಿಕಾರಿಗಳು ತಮಗಿರುವ ವಿಶೇಷ ಅಧಿಕಾರ ಬಳಸಿ ಈ ಬಗ್ಗೆ ತನಿಖೆ ಮಾಡುವುದು ತೀರಾ ಅಗತ್ಯವಾಗಿದೆ.















