ಪರಾಭವಗೊಳ್ಳಬೇಕಾಗಿದ್ದು ನಮ್ಮೊಳಗಿನ ʼಅಹಂಕಾರʼ

WhatsApp
Telegram
Facebook
Twitter
LinkedIn

ಎನ್.ಎಸ್.ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತರು

ʼಪರಾಭವʼ ಎಂಬ ಸಂವತ್ಸರದ ಹೆಸರನ್ನು ಕೇಳಿದ ಕೂಡಲೇ ಎಲ್ಲರಲ್ಲಿಯೂ ಗೊಂದಲ. ಅರೇ ʼಪರಾಭವʼ ಎಂದರೆ ಸೋಲು ಎಂದು ಅರ್ಥವಲ್ಲವೆ? ಸೋಲನ್ನು ಸೂಚಿಸುವ ಪದವನ್ನು ಹೇಳಿ ಯುಗಾದಿಗೆ ʼಶುಭʼ ಎಂದು ಹಾರೈಸುವುದು ಹೇಗೆ? ಏಕೋ ಕಸಿವಿಸಿ ಎನ್ನಿಸುತ್ತದೆ ಎಂದು ಬಹಳ ಜನ ಅಭಿಪ್ರಾಯ ಪಡುತ್ತಿದ್ದಾರೆ.

ಹೌದು ʼಪರಾಭವʼ ಎನ್ನುವ ಪದದ ಅರ್ಥ ಸೋಲು ಎಂದೇ, ಆದರೆ ಸೋಲಬೇಕಾಗಿರುವುದು ಯಾವುದು? ಅದು ನಮ್ಮೊಳಗಿನ ʼಅಹಂಕಾರʼ, ಅದು ಅಡಗಿದರೆ ವಿಜಯದ ಹಾದಿ ಸುಗಮವಾಗುತ್ತದೆ. ಬೇರೆಯವರಿಗೆ ಹಾರೈಸುವಾಗಲೇ ಅವರ ವ್ಯಕ್ತಿತ್ವವನ್ನು ಗುರುತಿಸಲು ಅಡ್ಡಿಯಾಗಿರುವ ನಮ್ಮೊಳಗಿನ ಅಹಂಕಾರವನ್ನು ನಾಶಗೊಳಿಸಿ ಕೊಳ್ಳೋಣ ಎಂದು ಆಶಿಸುತ್ತಲೇ ಹಾರೈಸೋಣ.

ಸಂವತ್ಸರ ಚಕ್ರದಲ್ಲಿ ಅರವತ್ತು ಸಂವತ್ಸರಗಳಿವೆ. ಇದನ್ನು ಚಂದ್ರ ಸ್ಪುಟ ಮತ್ತು ಸೂರ್ಯಸ್ಪಟದ ಹೊಂದಾಣಿಕೆಗೆ ಅನುಗುಣವಾಗಿ ರೂಪಿಸಲಾಗಿದೆ. ಈ ಚಕ್ರದಲ್ಲಿ ಮೊದಲ ಇಪ್ಪತ್ತು ಸಂವತ್ಸರಗಳು ಸಾತ್ವಿಕವೆಂದೂ ಅದಕ್ಕೆ ಬ್ರಹ್ಮನು ಅಧಿದೇವನೆಂದು, ನಂತರ ಇಪ್ಪತ್ತು ರಾಜಸವೆಂದೂ ಮತ್ತು ಅದಕ್ಕೆ ಮಹಾವಿಷ್ಣುವು ಅಧಿದೇವತೆಯೆಂದೂ ಮತ್ತು ಕೊನೆಯ ಇಪ್ಪತ್ತು ತಾಮಸವೆಂದು ಅದಕ್ಕೆ ಪರಶಿವ ಅಧಿದೇವತೆಯೆಂದೂ ಹೇಳಲಾಗಿದೆ. ಪರಾಭವ ಸಂವತ್ಸರವು ನಲವತ್ತನೆಯದು, ಅಲ್ಲಿಗೆ ವಿಷ್ಣುವಿನ ಚಕ್ರ ಮುಗಿಯುತ್ತದೆ. ʼಪರʼ ಎನ್ನುವುದು ಈ ಅಳತೆ ಕೂಡ ಹೌದು. ಈ ಅಳತೆಯಲ್ಲಿನ ಬದಲಾವಣೆಯನ್ನೂ ʼಪರಾಭವʼ ಎನ್ನುವ ಪದ ಸೂಚಿಸುತ್ತದೆ. ಕುತೂಹಲಕರ ಸಂಗತಿ ಎಂದರೆ ಭಾಸ್ಕರಾಚಾರ್ಯನ ʼಕರಣ ಕುತೂಹಲʼ ಕೃತಿಯಲ್ಲಿ ಈ ಸಂವತ್ಸರದ ಹೆಸರನ್ನು ʼಪರಾತ್ಪರʼ ಎಂದು ಕರೆಯಲಾಗಿದೆ. ಈ ಪದದ ಅರ್ಥ ಅತ್ಯಂತ ಶ್ರೇಷ್ಟವಾದದ್ದು ಎಂದು ಮೋಕ್ಷದ ಕಲ್ಪನೆ ಕೂಡ ಈ ಪದದಲ್ಲಿದೆ. ಪರಾಭವ ಕೂಡ ಇದೇ ಅರ್ಥವನ್ನು ಧ್ವನಿಸುವ ಸಾಧ್ಯತೆ ಇದೆ.

ಮೂರನೆಯ ಚಕ್ರದಲ್ಲಿನ ಕೆಲವು ಸಂವತ್ಸರದ ಹೆಸರುಗಳು ಇದು ಪರಶಿವನ ಅಧಿಪತ್ಯದ ಚಕ್ರವಾದ್ದರಿಂದ ಅದನ್ನು ಧ್ವನಿಸುತ್ತವೆ. ರಾಕ್ಷಸ(49) ರೌದ್ರ(54) ದುರ್ಮತಿ(55) ರಕ್ತಾಕ್ಷಿ(58) ಎಲ್ಲವೂ ಭೀಭತ್ಸತೆಯನ್ನು ಸೂಚಿಸುವ ಹೆಸರುಗಳು. ಇವು ಪರಶಿವನಿಗೆ ಸಂಬಂಧಪಟ್ಟಿದ್ದಾದ್ದರಿಂದ ಮಂಗಳದ ಸಾಧ್ಯತೆಗಳನ್ನೇ ಧ್ವನಿಸುತ್ತದೆ. ಕೊನೆಯ ಎಂದರೆ ಅರವತ್ತನೆಯ ಸಂವತ್ಸರ ʼಕ್ಷಯʼ ಹೀಗೆಂದರೆ ಚಕ್ರ ಮುಗಿಯುತು ಎನ್ನುವುದೇ ಪ್ರಧಾನ ಅರ್ಥ. ಪ್ರಭವದಿಂದ ಹೊಸ ಚಕ್ರ ಆರಂಭವಾಗುತ್ತದೆ.

ಇವೆಲ್ಲವೂ ಸಂವತ್ಸರದ ಹೆಸರಿನ ನೇರ ಅರ್ಥಗಳಾಯಿತು. ವರರುಚಿಯ ʼಚಂದ್ರವಾಕ್ಯʼದಲ್ಲಿ ಇವಕ್ಕಿರುವ ನಿಗೂಢ ಅರ್ಥಗಳನ್ನೂ ಸೂಚಿಸಲಾಗಿದೆ. ಪರಾಭವ ಎನ್ನುವುದನ್ನು ಕಟಪಯಾದಿ ಸೂತ್ರದ ಅನ್ವಯ ಬಿಡಿಸಿ ಕೊಂಡಾಗ ಪ(1) ರಾ(2) ಭ (3) ವ(4) ದೊರಕುತ್ತದೆ. ಇದರ ಮೊತ್ತ 10 ಅದು ಚಂದ್ರ ಮತ್ತು ಭೂಮಿಯ ನಡುವೆ ಆ ಸಂವತ್ಸರದಲ್ಲಿನ ಅಂತರದ ಮಾಪಕ ಕೂಡ ಹೌದು. ಇದು ಎಲ್ಲಾ ಸಂವತ್ಸರಕ್ಕೂ ಅನ್ವಯಿಸುತ್ತದೆ. ಹೀಗಾಗಿ ನಮ್ಮ ಪೂರ್ವಿಕರು ಸಂವತ್ಸರದ ಹೆಸರುಗಳನ್ನು ಇಡುವಾಗಲೇ ಅದರ ಗಣತೀಯ ಸಮೀಕರಣಗಳನ್ನೂ ಕೂಡ ಸೂಚಿಸಿದ್ದಾರೆ ಎನ್ನುವುದು ಮಹತ್ವದ ಸಂಗತಿ. ಈ ಕುರಿತು ಹೆಚ್ಚಿನ ಚರ್ಚೆಗಳು ನಡೆಯುವ ಅಗತ್ಯವಿದೆ.

ಇಷ್ಟು ಗಹನವಾದ ಚರ್ಚೆಯೇಕೆ? ಪರಾಭವ ಎಂಬ ಸಂವತ್ಸರದ ಹೆಸರು ಸೋಲನ್ನು ಸೂಚಿಸುವುದಿಲ್ಲ ಎಂದು ಅರ್ಥಮಾಡಿಕೊಂಡರಾಯಿತಲ್ಲವೆ? ಈ ಸಂವತ್ಸರದಲ್ಲಿ ಜನಿಸಿದವರೂ ವಿಜಯದ ಕಡೆಗೆ ಸಾಗುತ್ತಾರೆ. ಈ ಕುರಿತು ಸರಳ ಅರ್ಥವನ್ನು ತೆಗೆದು ಕೊಂಡು ಯಾರೂ ಭಯ ಪಡಬೇಕಾಗಿಲ್ಲ. ಎಲ್ಲರಿಗೂ ಯುಗಾದಿಯ ಶುಭಾಶಯಗಳು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon