ಸಮಾನತೆ-ಮಾನವತಾ ಮೌಲ್ಯಗಳನ್ನು ಅಳವಡಿಸಿಕೊಂಡಲೇ ಅಂಬೇಡ್ಕರ್ ಅವರಿಗೆ ಗೌರವ: ಕೃಷ್ಣ ಬೈರೇಗೌಡ

WhatsApp
Telegram
Facebook
Twitter
LinkedIn

ಬೆಂಗಳೂರು: ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುವ ಮನೋಭಾವಕ್ಕೆ ಅವಕಾಶ ನೀಡದೆ, ಎಲ್ಲರೂ ಸಮಾನರು ಎಂಬ ಮಾನವತಾ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹನೀಯರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆ–2026 ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಇದಕ್ಕೂ ಮುಂಚಿತವಾಗಿ ಜಿಬಿಎ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿರುವ ಪೌರಕಾರ್ಮಿಕರನ್ನು ಗುರುತಿಸಿ ಅವರುಗಳಿಗೆ ಸನ್ಮಾನ ಮಾಡಲಾಯಿತು. ಅತ್ಯಂತ ಹೆಚ್ಚಿನ ಅಂಕ ಗಳಿಸಿರತಕ್ಕಂತಹ ಪೌರಕಾರ್ಮಿಕರ ಮಕ್ಕಳನ್ನು ಕೂಡ ಜಿಬಿಎ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣ ಬೈರೇಗೌಡ, ಡಾ. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲಾ ಸಮುದಾಯಗಳ ಏಳಿಗೆಗೆ-ಅಭ್ಯುದಯಕ್ಕೆ ಬೆಳಕಾದವರು. ಮಾನವತಾ ಧರ್ಮವನ್ನು ಪ್ರಬಲವಾಗಿ ನಂಬಿದವರು. ಬುದ್ಧನ ಕಾಲದಿಂದಲೇ ನಮ್ಮ ದೇಶದಲ್ಲಿ ಮಾನವ ಧರ್ಮದ ಪರಂಪರೆ ಜೀವಂತವಾಗಿದೆ. ಒಂದೇ ಗಾಳಿ, ನೀರು ಸೇವಿಸುವ ಎಲ್ಲಾ ಮನುಷ್ಯರೂ ಒಂದೇ ಎಂಬ ಅರಿವು ಮೂಡಿಸಿದವರು ಅವರಾಗಿದ್ದಾರೆ ಎಂದು ಹೇಳಿದರು.

ಬಸವಣ್ಣ, ಮಹಾತ್ಮ ಗಾಂಧೀಜಿ ಹಾಗೂ ಕುವೆಂಪು ಸೇರಿದಂತೆ ಅನೇಕ ಮಹನೀಯರು ಮಾನವತಾ ಧರ್ಮ ಮತ್ತು ಸಮಾನತೆಯ ಸಂದೇಶವನ್ನು ಪ್ರತಿಪಾದಿಸಿದ್ದಾರೆ. ಆದರೆ ಇಂದಿಗೂ ಸಮಾಜದಲ್ಲಿ ಸಂಪೂರ್ಣ ಸಮಾನತೆ ಸಾಧ್ಯವಾಗಿಲ್ಲ. ನಾವುಗಳು ಸಮಾನತೆಯ ಬದುಕನ್ನು ಸಾಧ್ಯವಾಗಿಸದೆ ಕೇವಲ ಅಂಬೇಡ್ಕರ್ ಅವರ ಮೂರ್ತಿಗೆ ಹೂಮಾಲೆ ಹಾಕಿ ಜೈಕಾರ ಕೂಗಿದರೆ ಗೌರವ ಸಲ್ಲಿಸಿದಂತಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮೇಲು-ಕೀಳು ಎಂಬ ಮನೋಭಾವವನ್ನು ಸಮಾಜದಿಂದ ಸಂಪೂರ್ಣವಾಗಿ ತೊಡೆದುಹಾಕಬೇಕು. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಎಲ್ಲರೂ ಸಮಾನರು ಎಂಬ ಮೌಲ್ಯವನ್ನು ನಿಜವಾಗಿ ಅಳವಡಿಸಿಕೊಂಡಾಗಲೇ ನಾವು ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು ಸಚಿವರು ಹೇಳಿದರು.

ಪೌರಕಾರ್ಮಿಕರ ಕುಂದುಕೊರತೆಗಳು ಮತ್ತು ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಜಿಬಿಎ ಹಾಗೂ ಐದು ನಗರ ಪಾಲಿಕೆಗಳು ಒಟ್ಟಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ಕಾರ್ಯಕ್ರಮ ಆಯೋಜಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಎಸ್ಐಆರ್ ಪ್ರಕ್ರಿಯೆಯ ಕಾರಣದಿಂದ ಆಚರಣೆ ವಿಳಂಬವಾಗಿದ್ದು, ಇದೀಗ ಆದ್ಯತೆಯ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಮಾತನಾಡಿ, ನಮ್ಮ ಪೌರಕಾರ್ಮಿಕರ ಮಕ್ಕಳು ರಾಜ್ಯಮಟ್ಟದಲ್ಲಿ ರ್ಯಾಂಕ್ ಗಳಿಸಿರುವುದು, ಎಂಬಿಬಿಎಸ್ ಸೀಟು ಪಡೆದಿರುವುದು ಹಾಗೂ ಬಿಎ, ಬಿಎಡ್ ಶಿಕ್ಷಣ ಪೂರೈಸಿರುವುದು ದೊಡ್ಡ ಸಕಾರಾತ್ಮಕ ಸಂದೇಶವಾಗಿದೆ. ಪೌರಕಾರ್ಮಿಕರ ಮಕ್ಕಳು ಸಹ ವಿದ್ಯಾವಂತರಾಗಿ ಈ ನಾಡಿನ ಉನ್ನತ ವ್ಯಕ್ತಿಗಳಾಗುವ ಹಾದಿಯಲ್ಲಿ ಸಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

​ಎಲ್ಲಾ ಪೌರಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಿ, ಅವರನ್ನು ಸಮಾಜದ ಉನ್ನತ ಹುದ್ದೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಣ ಕೊಡಿಸಬೇಕು. ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಪೌರಕಾರ್ಮಿಕ ವೃತ್ತಿಗೆ ತರಬಾರದು ಎಂದು ಕಿವಿಮಾತು ಹೇಳಿದರು.

ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ ಅಶೋಕ್ ಸಾಲಪ್ಪ, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತರುಗಳಾಗ ಸುಷಮಾ ಗೋಡಬೋಲೆ, ನಿತೀಶ್, ನಗರ ಪಾಲಿಕೆಗಳ ಆಯುಕ್ತರುಗಳಾಗದ ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಓ ಕರೀಗೌಡ, ಅಪರ ಆಯುಕ್ತರುಗಳು, ಜಂಟಿ ಆಯುಕ್ತರುಗಳು, ಉಪ ಆಯುಕ್ತರುಗಳು, ಪೌರಕಾರ್ಮಿಕರು ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon