ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಅರ್ಹರು ಬಿಟ್ಟುಹೋಗದಂತೆ ಕ್ರಮ: ಕೆ. ಎನ್ ರಮೇಶ್

WhatsApp
Telegram
Facebook
Twitter
LinkedIn

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪ್ರಸ್ತುತ ಪ್ರಗತಿಯಲ್ಲಿದ್ದು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟುಹೋಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದಕ್ಷಿಣ ನಗರಪಾಲಿಕೆ ಆಯುಕ್ತ ಕೆ. ಎನ್ ರಮೇಶ್ ತಿಳಿಸಿದರು.

ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಎಸ್‌ಐಆರ್ ಹಂತ-2 ತರಬೇತಿ ಶಿಬಿರವನ್ನು ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ಹಂತ-1 ರಲ್ಲಿ ಅತ್ಯುತ್ತಮ ಕಾರ್ಯನಿರ್ವಣೆ ತೋರಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಭಿನಂದನಾ ಪತ್ರವನ್ನು ವಿತರಿಸಿ ಗೌರವಿಸಲಾಯಿತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೆ. ಎನ್ ರಮೇಶ್, ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟವಾಗಿದೆ. ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 10 ಲಕ್ಷ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ. ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿಲ್ಲದ, ಬೇರೆಡೆಗೆ ಸ್ಥಳಾಂತರಗೊಂಡ ಅಥವಾ ಮೃತರಾದ ಸುಮಾರು 10 ಲಕ್ಷ ಮತದಾರರನ್ನು ಎಸ್‌ಡಿಡಿ (ಶಿಫ್ಟೆಡ್, ಡೆಡ್, ಆಬ್ಸೆಂಟ್) ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸ್ಥಳಾಂತರಗೊಂಡ ಮತದಾರರು ತಾತ್ಕಾಲಿಕವಾಗಿ ಬೇರೆ ಕ್ಷೇತ್ರಗಳಿಗೆ ತೆರಳಿರಬಹುದು. ಅಂತಹ ಅರ್ಹ ಮತದಾರರನ್ನು ಮತ್ತೆ ಪಟ್ಟಿಗೆ ಸೇರಿಸಲು ನಮೂನೆ-6 ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಟೋ ಪ್ರಚಾರ, ಶಾಲೆ-ಕಾಲೇಜುಗಳಲ್ಲಿ ಅರಿವು ಹಾಗೂ ಮತಗಟ್ಟೆಗಳಲ್ಲಿ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸಲಾಗುತ್ತಿದೆ. ಈ ತಿಂಗಳ 19 ಮತ್ತು 20 ರಂದು ವಿಶೇಷ ಅಭಿಯಾನ ನಡೆಸಲಿದ್ದು, ಬಿಎಲ್‌ಒಗಳು ಮತಗಟ್ಟೆಗಳಲ್ಲಿ ಕುಳಿತು ಅರ್ಜಿ ಸ್ವೀಕರಿಸಲಿದ್ದಾರೆ. ಈ ಪ್ರಕ್ರಿಯೆಯ ಸಲುವಾಗಿ ಬಿಎಲ್‌ಒ ಹಾಗೂ ನೋಂದಣಾಧಿಕಾರಿಗಳಿಗೆ ಪರಿಣಾಮಕಾರಿ ವಿಲೇವಾರಿಗಾಗಿ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಸದ್ಯ ಕರಡು ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆಯು ನಿರಂತರ ಪ್ರಕ್ರಿಯೆಯಾಗಿದ್ದು, ನಮೂನೆ-6ರ ಜೊತೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಯಾವಾಗಲಾದರೂ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. 2002ರ ಮತದಾರರ ವಿವರ ಲಭ್ಯವಿಲ್ಲದಿದ್ದರೆ, ಚುನಾವಣಾ ಆಯೋಗವು ಗುರುತಿಸಿರುವ 11 ಪರ್ಯಾಯ ದಾಖಲೆಗಳಲ್ಲಿ (ಎಸ್‌ಎಸ್‌ಎಲ್‌ಸಿ/ ಪಿಯುಸಿ/ ಜಾತಿ/ ಆದಾಯ ಪ್ರಮಾಣಪತ್ರಗಳು ಇತ್ಯಾದಿ) ಯಾವುದಾದರೂ ಒಂದನ್ನು ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರವೂ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದವರೆಗೆ ಹೆಸರು ಸೇರ್ಪಡೆಗೆ ಅವಕಾಶವಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 4 ಲಕ್ಷ ಜನರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಾಗಿರುವುದರಿಂದ 237 ಹೆಚ್ಚುವರಿ ಸಹಾಯಕ ಮತದಾರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಿಎಲ್‌ಒಗಳು ನೋಟಿಸ್ ನೀಡಿದಾಗ ಸಾರ್ವಜನಿಕರು ಸಹ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕಿದೆ. ಪ್ರಕ್ರಿಯೆಯ ವೇಳೆ ಮಾನಸಿಕವಾಗಿ ಬಳಲುವ ಸಿಬ್ಬಂದಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಸ್ಥಳೀಯ ಅಥವಾ ಕೆಲಸದ ಒತ್ತಡಗಳಿದ್ದರೆ ನೇರವಾಗಿ ಕಚೇರಿಯನ್ನು ದಕ್ಷಿಣ ನಗರ ಪಾಲಿಕೆಯ ಕೇಂದ್ರ ಕಚೇರಿಗೆ ಸಂಪರ್ಕಿಸಬಹುದಾಗಿದೆ. ಕರ್ತವ್ಯದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಕಾಯ್ದುಕೊಂಡರೆ ಪಾಲಿಕೆ ಆಡಳಿತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೆ. ಎನ್ ರಮೇಶ್ ತಿಳಿಸಿದರು.

ಈ ವೇಳೆ ದಕ್ಷಿಣ ನಗರ ಪಾಲಿಕೆಯ ಎಲೆಕ್ಷನ್ ತಹಶೀಲ್ದಾರ್ ರಶ್ಮಿ, ಕಂದಾಯ ಅಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ ಡಾ. ಈಶ್ವರ್ ಎಸ್ ನಾಯ್ಡು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon