ಬೆಂಗಳೂರು: ದಕ್ಷಿಣ ನಗರ ಪಾಲಿಕೆ ವತಿಯಿಂದ ಎಸ್‌ಐಆರ್ ಹಂತ-2 ರ ತರಬೇತಿ ಶಿಬಿರವನ್ನು ಬಿಷಪ್ ಕಾಟನ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲೆಕ್ಟೋರಲ್ ಲಿಟರಸಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕೂಡ ನಡೆಯಿತು.
ದಕ್ಷಿಣ ನಗರ ಪಾಲಿಕೆಯ ಎಲೆಕ್ಷನ್ ತಹಶೀಲ್ದಾರ್ ರಶ್ಮಿ ಕಾರ್ಯಕ್ರಮ ಉದ್ಘಾಟಿಸಿ ತರಬೇತಿಯ ನೇತೃತ್ವ ವಹಿಸಿ ಅಗತ್ಯ ಮಾರ್ಗದರ್ಶನಗಳನ್ನು ನೀಡಿದರು. ಹೊಸ ಮತದಾರರನ್ನು ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಸೇರ್ಪಡೆಯಾಗದಂತೆ ತಡೆದು ಸರಿಯಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ನಮ್ಮ ಉದ್ದೇಶವಾಗಿದೆ, ಪ್ರತಿಯೊಬ್ಬ ವಿದ್ಯಾರ್ಥಿ, ವಯೋಮಿತಿ ಅರ್ಹ ಹೊಂದಿರುವವರು ಮತದಾನದಾನದಿಂದ ದೂರ ಉಳಿಯದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಮೊದಲ ಹಂತದ ಎಸ್.ಐ.ಆರ್ ಪ್ರಕ್ರಿಯೆಯ ನಂತರ ಮತದಾರರಿಗೆ ನೀಡಲಾಗುವ ನೋಟಿಸ್ ಜೊತೆಗೆ ಚುನಾವಣಾ ಆಯೋಗ ನಿಗದಿಪಡಿಸಿರುವ 12 ರೀತಿಯ ದಾಖಲೆಗಳ ಪಟ್ಟಿಯೂ ಇರಲಿದೆ. 10ನೇ ತರಗತಿ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಜನನ ಪ್ರಮಾಣಪತ್ರ ಹಾಗೂ ಖಾಯಂ ನಿವಾಸ ಪ್ರಮಾಣಪತ್ರ ಸೇರಿದಂತೆ 12 ನಮೂದಿತ ದಾಖಲೆಗಳಲ್ಲಿ ಸೂಕ್ತ ದಾಖಲೆಯನ್ನು ನಾಗರಿಕರು ಸಲ್ಲಿಸಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಅಥವಾ ಸ್ಥಳಾಂತರಗೊಂಡಿರುವ ನಾಗರಿಕರು ಫಾರ್ಮ್-6 ಹಾಗೂ 2002ರ ಎಸ್‌ಐಆರ್ ಮಾಹಿತಿಯನ್ನೊಳಗೊಂಡ ಡಿಕ್ಲರೇಷನ್ ಫಾರ್ಮ್ ಸಲ್ಲಿಸಿ ಮತ್ತೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಂದಾಯ ಅಧಿಕಾರಿ, ಮತದಾರರ ನೋಂದಣಾಧಿಕಾರಿ ಡಾ. ಈಶ್ವರ್ ಎಸ್ ನಾಯ್ಡು ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯುವಜನತೆಯ ಭಾಗವಹಿಸುವಿಕೆ ಅತ್ಯಂತ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಸುನಿಲಾ ಕುಮಾರಿ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಹೇಮಲತಾ, ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳು ಮತ್ತು ನೌಕರರು, ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.















