ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ, ಒಳವರ್ಗೀಕರಣವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಹೆಸರಿನಲ್ಲಿ ದಲಿತ ಸಮುದಾಯಗಳ ಏಕತೆಗೆ ಧಕ್ಕೆ ತರುವ ಕ್ರಮವಾಗಿದ್ದು, ಒಳಮೀಸಲಾತಿಗೆ ಅವಕಾಶ ಕಲ್ಪಿಸಬಾರದು ಎಂದು ಮಾಲ ಮಹಾನಾಡು ರಾಷ್ಟ್ರೀಯ ಅಧ್ಯಕ್ಷ ಡಾ. ಆರ್.ಎಸ್. ರತ್ನಾಕರ್ ಹೇಳಿದರು.
ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಎಸ್‌ಸಿ ಒಳಮೀಸಲಾತಿಯನ್ನು ದಲಿತ ಸಮುದಾಯ ವಿರೋಧಿಸುತ್ತಿದ್ದು, ಈ ಸಂಬಂಧ ಹಮ್ಮಿಕೊಂಡಿರುವ ಶಾಂತಿಯುತ ಹೋರಾಟ ನಿಲ್ಲುವುದಿಲ್ಲ. ಮೀಸಲಾತಿಯ ಪಾಲಿಗಾಗಿ ದಲಿತ ಸಮುದಾಯಗಳ ನಡುವೆ ಸಂಘರ್ಷ ಉಂಟುಮಾಡುವ ಬದಲು, ಎಲ್ಲ ಪರಿಶಿಷ್ಟ ಜಾತಿಗಳ ಏಕತೆ ಮತ್ತು ರಾಜಕೀಯ ಶಕ್ತಿಯನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ತೆಲುಗು ರಾಜ್ಯಗಳಲ್ಲಿ ಒಟ್ಟು 59 ಪರಿಶಿಷ್ಟ ಜಾತಿಗಳಿದ್ದು, ಒಳಮೀಸಲಾತಿಯ ಮೂಲಕ ಕೆಲವೇ ಸಮುದಾಯಗಳಿಗೆ ಸೀಮಿತ ಪ್ರಯೋಜನ ದೊರೆಯುವತ್ತಿದೆ. ಕರ್ನಾಟಕದಲ್ಲಿ 101 ಪರಿಶಿಷ್ಟ ಜಾತಿಗಳು ಹಾಗೂ ದೇಶಾದ್ಯಂತ 1,108 ಪರಿಶಿಷ್ಟ ಜಾತಿಗಳು ಇರುವ ಸಂದರ್ಭದಲ್ಲಿ, ಎಲ್ಲ ಸಮುದಾಯಗಳಿಗೂ ಸಮಾನವಾಗಿ ನ್ಯಾಯ ಒದಗಿಸುವುದು ಹೇಗೆ ಸಾಧ್ಯ ಎಂಬುದನ್ನು ಸರ್ಕಾರಗಳು ಸ್ಪಷ್ಟಪಡಿಸಬೇಕು ಎಂದರು.
ಇತರ ಸಮುದಾಯಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶ ಸರ್ಕಾರಕ್ಕಿದ್ದರೆ, ಪರಿಶಿಷ್ಟ ಜಾತಿಗಳ ಒಟ್ಟಾರೆ ಮೀಸಲಾತಿಯನ್ನು ಹೆಚ್ಚಿಸಿ ಹೆಚ್ಚುವರಿ ಅವಕಾಶ ನೀಡಬಹುದು. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಮೀಸಲಾತಿಯ ಹೆಸರಿನಲ್ಲಿ ದಲಿತ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮತ್ತು ಸಂಘರ್ಷ ಸೃಷ್ಟಿಸುವ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇತ್ತೀಚೆಗೆ ಜಾರಿಗೊಳಿಸಿರುವ ಒಳಮೀಸಲಾತಿ ಸಂಬಂಧಿತ ಕಾನೂನುಗಳು ಶಾಶ್ವತವಲ್ಲ. ಜನರು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಒಗ್ಗಟ್ಟಿನಿಂದ ಹಾಗೂ ಶಾಂತಿಯುತವಾಗಿ ಹೋರಾಟ ನಡೆಸಿದರೆ ಯಾವುದೇ ತಪ್ಪು ಕಾನೂನನ್ನು ಸರ್ಕಾರ ಹಿಂಪಡೆಯಬೇಕಾಗುತ್ತದೆ. ರೈತರ ಹೋರಾಟದ ಸಂದರ್ಭದಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು. ಜನರು ನ್ಯಾಯಯುತ ಮತ್ತು ಗಂಭೀರವಾದ ಹೋರಾಟ ನಡೆಸಿದಾಗ ಸರ್ಕಾರಗಳು ಜನರ ಧ್ವನಿಗೆ ಸ್ಪಂದಿಸಲೇಬೇಕು. ಎಸ್‌ಸಿ ಸಮುದಾಯಗಳನ್ನು ಒಳವರ್ಗೀಕರಣಕ್ಕೆ ಅವಕಾಶವಿಲ್ಲದಂತೆ ಸಂಸತ್ತಿನಲ್ಲಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರಬೇಕು. ಈ ಬೇಡಿಕೆ ಈಡೇರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ದಲಿತ ಸಮುದಾಯಗಳ ಏಕತೆ, ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯವನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲರೂ ಶಾಂತಿಯುತ, ನಿರಂತರ ಹಾಗೂ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಸಜ್ಜಾಗಬೇಕು ಎಂದು ಡಾ. ರತ್ನಾಕರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಜೆ. ಕೇಶವ ಪ್ರಸಾದ್, ಎಂ. ನರೇಶ್, ಜಿ. ಗೋವಿಂದಪ್ಪ, ಅರವಿಂದ್ ಎಚ್. ಎನ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.















