ಬೆಂಗಳೂರು: ನ್ಯಾಯ ವ್ಯವಸ್ಥೆ ಹಾಗೂ ಮಾನವೀಯತೆಯ ನಡುವೆ ಸಂಘರ್ಷ ಏರ್ಪಟ್ಟಾಗ ಯಾವಾಗಲೂ ಮಾನವೀಯತೆಯೇ ಗೆಲ್ಲಬೇಕು. ವಕೀಲ ಸಮುದಾಯ ಕೂಡ ಮಾನವೀಯತೆಯ ಪರವಾಗಿ ನಿಲ್ಲಬೇಕು ಎಂದು ಪ್ರಧಾನಿತ ಹಿರಿಯ ವಕೀಲರಾದ ಸಿ ಎಚ್ ಹನುಮಂತರಾಯ ಅಭಿಪ್ರಾಯಪಟ್ಟರು.
ಗುರುವಾರ ವಕೀಲರ ಭವನದಲ್ಲಿ ಬೆಂಗಳೂರು ವಕೀಲರ ಸಾಹಿತ್ಯ ಕೂಟ ಆಯೋಜಿಸಿದ್ದ ಅನುಭವ ಮೃತ ಸರಣಿ ಉಪನ್ಯಾಸ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರೋಪಿಯು ಸಂದರ್ಭದ ಸಂತ್ರಸ್ತನಾಗಿದ್ದಾಗ ಅಥವಾ ಮಾನವೀಯತೆಯ ಪ್ರಶ್ನೆ ಎದುರಾದಾಗ ಸಾಕ್ಷಿಗಳ ವಿಚಾರಣೆಯ ಸಂದರ್ಭದಲ್ಲಿ ಸೂಕ್ಷ್ಮವಾಗಿ ಮತ್ತು ಜಾಗರೂಕತೆಯಿಂದ ವ್ಯವಹರಿಸುವುದು ಅತ್ಯಗತ್ಯವಾಗಿದೆ. ನ್ಯಾಯ ಹಾಗೂ ಮಾನವೀಯತೆಯ ನಡುವಿನ ಹೋರಾಟದಲ್ಲಿ ಮಾನವೀಯತೆ ಪರ ನಿಂತು ಸೋತರೂ ಅದರಲ್ಲಿ ಒಂದು ಸಾರ್ಥಕತೆ ಮತ್ತು ಸಮಾಧಾನವಿರುತ್ತದೆ ಎಂದು ಪ್ರತಿಪಾದಿಸಿದರು.
ಪ್ರಕರಣಗಳ ವಿಲೇವಾರಿ ವಿಳಂಬವಾಗುತ್ತಿರುವುದಕ್ಕೆ ಇಡೀ ವ್ಯವಸ್ಥೆ ಹಾಗೂ ಸರ್ಕಾರದ ನಿರಾಸಕ್ತಿ ಕಾರಣವಾಗಿದೆ. ಇದು ಸಹ ಮಾನವೀಯತೆಯ ವಿರುದ್ಧವಾಗಿದೆ. ನ್ಯಾಯಾಲಯಗಳಲ್ಲಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಅಥವಾ ಉತ್ಪನ್ನ ಬರುವುದಿಲ್ಲ ಎನ್ನುವ ಕಾರಣಕ್ಕೆ ಮೂಲಸೌಕರ್ಯ ಮತ್ತು ಸುಧಾರಣೆಗಳಿಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ತ್ವರಿತ ನ್ಯಾಯದಾನಕ್ಕಾಗಿ ಕನಿಷ್ಠ 50 ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಹಾಗೂ ಹೈಕೋರ್ಟ್ ಗೆ 20 ಹೆಚ್ಚುವರಿ ನ್ಯಾಯಮೂರ್ತಿಗಳ ಅಗತ್ಯವಿದೆ. ಕೋರ್ಟ್ ಸಂಕೀರ್ಣಗಳನ್ನು ರೇಸ್ ಕೋರ್ಸ್‌ನಂತಹ ವಿಶಾಲ ಜಾಗಕ್ಕೆ ಸ್ಥಳಾಂತರಿಸಿದರೆ ಸಾರ್ವಜನಿಕರಿಗೆ ಮತ್ತು ವಕೀಲರಿಗೆ ಅನುಕೂಲವಾಗುತ್ತದೆ. ಆದರೆ ಈ ವಿಚಾರದಲ್ಲಿ ಕೂಡ ಸರ್ಕಾರಕ್ಕೆ ಅಷ್ಟಾಗಿ ಆಸಕ್ತಿ ಇಲ್ಲ ಎನ್ನುವುದು ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ವಕೀಲರು ಸುದೀರ್ಘ ವೃತ್ತಿಜೀವನದ ಅನುಭವವನ್ನು ಮುಂದಿನ ಪೀಳಿಗೆಯ ವಕೀಲರಿಗೆ ತಲುಪಿಸುವುದು ಬಹು ಮುಖ್ಯವಾಗಿದೆ. ಇದರಿಂದ ವಕೀಲರು ಸಂವೇದನಾಶೀಲತೆಯಿಂದ ಕಾನೂನನ್ನು ಬಳಸಿ ನೊಂದವರಿಗೆ ನ್ಯಾಯ ಒದಗಿಸಲು ನೆರವಾಗಲಿದೆ. ಈ ನಿಟ್ಟಿನಲ್ಲಿ ಇಂದಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಕೌಟುಂಬಿಕ ಹಾಗೂ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಹಿತರಕ್ಷಣೆ ಮತ್ತು ಕಾನೂನು ನಿಯಮಗಳ ಸಮರ್ಥ ಬಳಕೆಯ ಕುರಿತು ಸುದೀರ್ಘವಾಗಿ ಮಾತನಾಡಿದ್ದೇನೆ. ಎವಿಡೆನ್ಸ್ ಆಕ್ಟ್ ಮತ್ತು ಸಿಆರ್‌ಪಿಸಿ ಅಡಿಯಲ್ಲಿ ಇರುವ ಕಾನೂನು ನಿಬಂಧನೆಗಳನ್ನು ವಕೀಲರು ಹೇಗೆ ಆರೋಪಿಯ ರಕ್ಷಣೆಗೆ ಹಾಗೂ ನಿರಪರಾಧಿತ್ವವನ್ನು ಸಾಬೀತುಪಡಿಸಲು ಸದುಪಯೋಗಪಡಿಸಿಕೊಳ್ಳಬಹುದು ಎನ್ನುವುದನ್ನು ತಿಳಿಸಿದ್ದೇನೆ ಎಂದು ಸಿ ಎಚ್ ಹನುಮಂತರಾಯ ಮಾಹಿತಿ ನೀಡಿದರು.
ಉಪನ್ಯಾಸದಲ್ಲಿ ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ್ ಬಿ ಗೌಡ, ಪ್ರಧಾನ ಕಾರ್ಯದರ್ಶಿ ಆನಂದ್ ವಿ, ಖಜಾಂಚಿ ಹರೀಶ್ ಜೆ ಸೇರಿದಂತೆ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ವಕೀಲರು ಉಪಸ್ಥಿತರಿದ್ದರು.















