ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಹಂತ-2 ರ ತರಬೇತಿ ಶಿಬಿರವನ್ನು ಗುರುವಾರ ವಿಜಯ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಎಲ್‌ಒ, ಬಿಎಲ್‌ಒ ಮೇಲ್ವಿಚಾರಕರು, ಎಇಆರ್‌ಒ ಹಾಗೂ ಇಆರ್‌ಒ ಅಧಿಕಾರಿಗಳು ಭಾಗವಹಿಸಿದ್ದರು.
ಭಾರತೀಯ ಚುನಾವಣಾ ಆಯೋಗದ ಆದೇಶ ಹಾಗೂ ಮಾನದಂಡಗಳಂತೆ ಮುಂಬರುವ ಎಸ್‌ಐಆರ್ ಪ್ರಕ್ರಿಯೆಯನ್ನು ಕೈಗೊಳ್ಳುವುದರ ಕುರಿತು ಶಿಬಿರದಲ್ಲಿ ವಿವರವಾದ ತರಬೇತಿ ನೀಡಲಾಯಿತು. ಸೌತ್ ಸಿಟಿ ಕಾರ್ಪೊರೇಷನ್‌ನ ಎಲೆಕ್ಷನ್ ತಹಶೀಲ್ದಾರ್ ರಶ್ಮಿ ಅವರು ಈ ತರಬೇತಿ ಕಾರ್ಯಕ್ರಮದ ನೇತೃತ್ವ ವಹಿಸಿ ಅಗತ್ಯ ಮಾರ್ಗದರ್ಶನಗಳನ್ನು ನೀಡಿದರು.
ತರಬೇತಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಶ್ಮಿ ಅವರು, ಇಂದು ಬಿಎಲ್‌ಒಗಳಿಗೆ ನೋಟಿಸ್ ಜನರೆಷನ್, ಕ್ಲೇಮ್ಸ್ ಹಾಗೂ ಆಬ್ಜೆಕ್ಷನ್ ಹಂತಗಳ ಬಗ್ಗೆ ತರಬೇತಿ ನೀಡಲಾಗಿದೆ. ಅರ್ಹ ಮತದಾರರನ್ನು ಹೊರಗುಳಿಯದಂತೆ ಹಾಗೂ ಅನರ್ಹ ಮತದಾರರು ಸೇರ್ಪಡೆಯಾಗದಂತೆ ತಡೆದು ಸರಿಯಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಮತದಾರರಿಗೆ ನೀಡಲಾಗುವ ನೋಟಿಸ್ ಜೊತೆಗೆ ಚುನಾವಣಾ ಆಯೋಗ ನಿಗದಿಪಡಿಸಿರುವ 12 ರೀತಿಯ ದಾಖಲೆಗಳ ಪಟ್ಟಿಯೂ ಇರಲಿದೆ. 10ನೇ ತರಗತಿ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಜನನ ಪ್ರಮಾಣಪತ್ರ ಹಾಗೂ ಖಾಯಂ ನಿವಾಸ ಪ್ರಮಾಣಪತ್ರ ಸೇರಿದಂತೆ 12 ನಮೂದಿತ ದಾಖಲೆಗಳಲ್ಲಿ ಸೂಕ್ತ ದಾಖಲೆಯನ್ನು ನಾಗರಿಕರು ಸಲ್ಲಿಸಬಹುದಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಅಥವಾ ಸ್ಥಳಾಂತರಗೊಂಡಿರುವ ನಾಗರಿಕರು ಫಾರ್ಮ್-6 ಹಾಗೂ 2002ರ ಎಸ್‌ಐಆರ್ ಮಾಹಿತಿಯನ್ನೊಳಗೊಂಡ ಡಿಕ್ಲರೇಷನ್ ಫಾರ್ಮ್ ಸಲ್ಲಿಸಿ ಮತ್ತೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಂದಾಯಾಧಿಕಾರಿ ಈಶ್ವರ್ ಎಸ್ ರಾಯುಡು ಸೇರಿದಂತೆ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳು, ನೌಕರರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.















