ಕರಾವಳಿಯ ವಿಶಿಷ್ಟ ಸಂಸ್ಕೃತಿಯನ್ನು ಪರಿಚಯಿಸಿದ ಕುಂದಾಪ್ರ ಕನ್ನಡ ಉತ್ಸವ

WhatsApp
Telegram
Facebook
Twitter
LinkedIn

ಬೆಂಗಳೂರು: ಕರಾವಳಿಯ ವಿಶಿಷ್ಟ ಸಂಸ್ಕೃತಿ, ಅಲ್ಲಿನ ಆಚಾರ-ವಿಚಾರ, ಸಂಪ್ರದಾಯ ಸೇರಿದಂತೆ ಯಕ್ಷಗಾನದ ಕಂಪನ್ನು ರಾಜಧಾನಿಯ ಮಡಿಲಿಗೆ ಹೊತ್ತು ತಂದಿದ್ದ ಕುಂದಾಪ್ರ ಕನ್ನಡ ಉತ್ಸವ- 2026 ಸಂಪನ್ನಗೊಂಡಿತು.

ಗೋವಿಂದರಾಜನಗರದ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಟೀಮ್ ಕುಂದಾಪುರಿಯನ್ಸ್ ಬಳಗದ ನೇತೃತ್ವದಲ್ಲಿ ಭಾವದ ಅಲೆ-ಭಾಷೆಯ ಸೆಲೆ ಎನ್ನುವ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದ ಉತ್ಸವದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ವೈಭವ ಕಣ್ಮನ ಸೆಳೆಯಿತು. ಅಲ್ಲಿನ ಕನ್ನಡ ಭಾಷೆ, ಕ್ರೀಡೆ, ಗ್ರಾಮೀಣ ಬದುಕು, ಸಾಂಪ್ರದಾಯಿಕ ಆಹಾರ ಮತ್ತು ಕರಾವಳಿಯ ಸಂಸ್ಕೃತಿಯನ್ನು ವೇದಿಕೆ ಮೂಲಕ ರಾಜಧಾನಿಯ ಮಂದಿಗೆ ಪರಿಚಯಿಸಲಾಗಿತ್ತು. ಕುಂದಾಪುರ ಪ್ರಾಂತ್ಯದ ಪುರಾತನ ವಸ್ತುಗಳ ಪ್ರದರ್ಶನ ಆಕರ್ಷಿಸಿತು.

ಕರಾವಳಿ ಕಡಲಲ್ಲಿ ಕಂಡು ಬರುವ ಕೊಡ್ರಿಮೀನ್, ಮದಮಗಳ್ ಮೀನ್, ಕಾಂಡಿಮೀನ್, ಮಾಲ್ ಮೀನ್, ಬೈಗೆಮೀನು, ಹೂಮೀನ್, ಬೆಳ್ಳಬ್, ಜಾರಿ, ಕರಿಮಾಜ್ ಸೇರಿದಂತೆ 20ಕ್ಕೂ ಹೆಚ್ಚು ವೈವಿಧ್ಯಮಯ ತಳಿಯ ಹಾಗೂ ನಿತ್ಯ ಆಹಾರಕ್ಕೆ ಬಳಸುವ ಮೀನುಗಳ ಆಹಾರೋತ್ಪನಗಳು ಉತ್ಸವದ ಆಕರ್ಷಣೆಯಾಗಿತ್ತು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಕುಂದಾಪ್ರ ರತ್ನ ಹಾಗೂ ಕುಂದಾಪ್ರ ಯುವರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಲಾರ್‌ಸಿನಿಮಾ ಖ್ಯಾತಿಯ ವಿಜಯಲಕ್ಷ್ಮಿ ಮೆಟ್ಟಿನಹೊಳೆ ಮತ್ತು ಶೋಧನ್ ಶೆಟ್ಟಿ ಅವರಿಂದ ಹಾಡ್ ಕುಂದಾಪುರ ಜುಗಲ್ ಬಂದಿ ಸಂಗೀತ ಗಾಯನ ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವರು, ವಿಜಯನಗರದ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ, ಕುಂದಾಪುರ ಭಾಗದ ಜನರ ಸಂಘಟನೆ ಮತ್ತು ಸಾಂಸ್ಕೃತಿಕ ಬದ್ಧತೆ ವಿಶೇಷವಾಗಿದೆ. ಇಲ್ಲಿನ ಜನರು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗದೆ ಇಡೀ ಪ್ರಪಂಚದಾದ್ಯಂತ ತಮ್ಮ ಅಸ್ತಿತ್ವ ಕಂಡುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾರಂತರ ಕೊಡುಗೆಗಳು ಅಪಾರವಾಗಿವೆ. ನಮ್ಮ ಪ್ರೌಢಶಾಲಾ ಶಿಕ್ಷಣದ ದಿನಗಳಲ್ಲೇ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯನ್ನು ಓದಿ ಪ್ರಭಾವಿತರಾಗಿದ್ದವರು ನಾವಾಗಿದ್ದೇವೆ. ಇಂತಹ ಹಲವು ಮಹಾನ್ ವ್ಯಕ್ತಿಗಳನ್ನು ಕರ್ನಾಟಕಕ್ಕೆ ಕೊಡುಗೆಯಾಗಿ ನೀಡಿದ ಕುಂದಾಪುರ ಪ್ರದೇಶದ ಜನರ ಒಗ್ಗಟ್ಟು ಹಾಗೂ ಭ್ರಾತೃತ್ವ ಶ್ಲಾಘನೀಯ ಎಂದರು.

 

ಉತ್ಸವದಲ್ಲಿ ಚಿತ್ರ ಸಾಹಿತಿ ಕವಿರತ್ನ ಡಾ ನಾಗೇಂದ್ರ ಪ್ರಸಾದ್ ಸೇರಿದಂತೆ ಹಲವು ಗಣ್ಯ ಮಾನ್ಯರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon