ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾರೀ ಲೋಪದೋಷಗಳು ಕಂಡುಬರುತ್ತಿದ್ದು, ಮುಖ್ಯವಾಗಿ ಈ ಮೂಲಕ ಮತದಾರರ ಹಕ್ಕುಗಳನ್ನು ದಮನಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಭೋವಿ ಸಂಘ ಮತ್ತು ಅಹಿಂದ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಬಲ್ಬ್ ಶ್ರೀನಿವಾಸ್ ಆರೋಪಿಸಿದರು.
ಎಸ್ಐಆರ್ ಪ್ರಕ್ರಿಯೆ ಮತ್ತು ಪಾಲಿಕೆ ಚುನಾವಣೆಯ ಕುರಿತು ಜಿಬಿಎ ಕೇಂದ್ರ ಕಚೇರಿಯ ಬಳಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಸಮಿತಿ ಸದಸ್ಯನಾಗಿ, ಭೋವಿ ಸಮುದಾಯದ ನಾಯಕನಾಗಿ ಎಸ್.ಐ.ಆರ್ ಪ್ರಕ್ರಿಯೆಲ್ಲಾಗುತಿರುವ ಲೋಪದೋಷಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಪ್ರಕ್ರಿಯೆಯ ಮೊದಲ ಹಂತದಲ್ಲಿ ರಾಜ್ಯಾದ್ಯಂತ ಸುಮಾರು 1 ಕೋಟಿ 7 ಲಕ್ಷ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ರಾಜ್ಯ ಚುನಾವಣಾ ಆಯೋಗ ನೀಡಿದೆ. ಇದರಲ್ಲಿ ಬೆಂಗಳೂರು ನಗರ ಒಂದರಲ್ಲೇ 40 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳು ನಾಪತ್ತೆಯಾಗಿವೆ ಇದು ಅವ್ಯವಸ್ಥೆ ಅಲ್ಲದೆ ಮತ್ತೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲವೆಡೆ ಮೃತಪಟ್ಟವರ ಹೆಸರುಗಳು ಇನ್ನೂ ಪಟ್ಟಿಯಲ್ಲಿ ಉಳಿದುಕೊಂಡಿವೆ, ಆದರೆ ಅವರ ಬದುಕಿರುವ ಮಕ್ಕಳ ಹೆಸರುಗಳು ನಾಪತ್ತೆಯಾಗಿವೆ. ಶೇಕಡ 15 ರಷ್ಟು ಮನೆಗಳಿಗೆ ಅಧಿಕಾರಿಗಳು ಸರಿಯಾಗಿ ಭೇಟಿಯ ನೀಡಿಲ್ಲ. ಸಾರ್ವಜನಿಕರು ಮತದಾರರ ಕಚೇರಿಗಳಿಗೆ ಅಲೆದಾಡಿದರೂ ಸೂಕ್ತ ಮಾಹಿತಿ ಅಥವಾ ಪರಿಹಾರ ಸಿಗುತ್ತಿಲ್ಲ. ತೀರಿಹೋದ ಹೆತ್ತವರ ಹೆಸರು ಪಟ್ಟಿಯಲ್ಲಿದೆ, ಬದುಕಿರುವ ನಮ್ಮ ಹೆಸರು ಇಲ್ಲ ಎಂದು ಮನವಿ ಮಾಡಿದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಬೆಂಗಳೂರು ಮಾಡಿ 5 ಪಾಲಿಕೆಗಳಾಗಿ ವಿಭಜಿಸಿ ಇದ್ದ 198 ವಾರ್ಡ್‌ಗಳನ್ನು 369 ವಾರ್ಡ್‌ಗಳಾಗಿ ಪರಿವರ್ತಿಸುವ ನಿರ್ಧಾರದಿಂದ ಗೊಂದಲ ಹೆಚ್ಚಾಗಿದೆ. ಹಿಂದೆ ಒಂದು ವಾರ್ಡ್‌ನಲ್ಲಿ 30 ರಿಂದ 40 ಸಾವಿರ ಮತದಾರರಿದ್ದರು. ಈಗ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಿ, ಲಕ್ಷಾಂತರ ಮತಗಳನ್ನು ಡಿಲೀಟ್ ಮಾಡಿರುವುದರಿಂದ, ಒಂದು ವಾರ್ಡ್‌ನಲ್ಲಿ ಕೇವಲ 10 ರಿಂದ 15 ಸಾವಿರ ಮತದಾರರು ಮಾತ್ರ ಉಳಿಯುವಂತಾಗಿದೆ. ಇದರಂತೆ ಚುನಾವಣೆ ನಡೆಸುವುದು ಅಸಂಜಸವಾಗಿದೆ. ಕೌನ್ಸಿಲರ್‌ಗಳು ಆಯ್ಕೆಯಾಗಿ ಬಂದರೆ ಅವರ ಕಾರ್ಯವ್ಯಾಪ್ತಿ ಅಪ್ರಸ್ತುತವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸುಪ್ರೀಂ ಕೋರ್ಟ್ ಆದೇಶವಿದ್ದರೂ ಎಲ್ಲಾ ಪಕ್ಷದ ರಾಜಕಾರಣಿಗಳು ಗೊಂದಲ ಸೃಷ್ಟಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕಳೆದ 10 ವರ್ಷಗಳಿಂದ ಮುಂದೂಡುತ್ತಾ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನ್ಯಾಯಾಲಯ ತನ್ನ ಶಕ್ತಿಯನ್ನು ತೋರಿಸಿ, ಯಾವುದೇ ಕಾರಣಕ್ಕೂ ಮುಂದೂಡದಂತೆ ಡಿಸೆಂಬರ್ ಒಳಗಾಗಿ ಚುನಾವಣೆ ನಡೆಸುವಂತೆ ಸ್ಪಷ್ಟ ನಿರ್ದೇಶನ ನೀಡಬೇಕು. ಸದ್ಯ ಸಿಬ್ಬಂದಿಗಳ, ವಾಹನಗಳ ಹಾಗೂ ಅನುದಾನದ ಕೊರತೆಯಿಂದ ಸಾರ್ವಜನಿಕ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದರು.
ಬೆಂಗಳೂರಿನಲ್ಲಿ ಕನ್ನಡಿಗರು 5ನೇ ಸ್ಥಾನದಲ್ಲಿ :
ಬೆಂಗಳೂರಿನಲ್ಲಿ ಕನ್ನಡಿಗರ ಸ್ಥಿತಿಗತಿಯ ಕುರಿತು ಮಾತನಾಡಿದ ಅವರು, ಸದ್ಯ ಕಾರ್ಯನಿರ್ವಹಿಸುತ್ತಿರುವ ಗ್ರೇಟರ್ ಬೆಂಗಳೂರು ಹಾಗೂ ಹೊಸ 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಸೂಕ್ತ ಪ್ರಾಮುಖ್ಯತೆ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳು ಏನು ಮಾಡುತ್ತಿವೆ ಎಂಬುದೇ ಅರ್ಥವಾಗುತ್ತಿಲ್ಲ. ಇಂದು ಬೆಂಗಳೂರಿನಲ್ಲಿ ಪ್ರಥಮ ಸ್ಥಾನ ಆಂಧ್ರದವರಿಗೆ, ಎರಡನೇ ಸ್ಥಾನ ತಮಿಳುನಾಡಿನವರಿಗೆ, ಮೂರನೇ ಸ್ಥಾನ ಮುಸ್ಲಿಮರಿಗೆ, ನಾಲ್ಕನೇ ಸ್ಥಾನ ಬಿಹಾರ, ರಾಜಸ್ಥಾನ ಹಾಗೂ ಕೇರಳದವರಿಗೆ ಸಿಕ್ಕರೆ ಕನ್ನಡಿಗರು 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಸರ್ಕಾರ ಹಾಗೂ ಸ್ಥಳೀಯ ಆಡಳಿತದಲ್ಲಿ ಕನ್ನಡಿಗರಿಗೆ ಗೌರವ, ಸೂಕ್ತ ಸ್ಥಾನಮಾನ ಹಾಗೂ ಪ್ರಶಸ್ತಿ-ಪ್ರಾಶಸ್ತ್ಯಗಳನ್ನು ನೀಡಬೇಕು. ಕನ್ನಡದ ನೆಲದಲ್ಲಿ ಕನ್ನಡಿಗರ ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸ ತಕ್ಷಣವೇ ಆಗಬೇಕು ಎಂದು ಬಲ್ಬ್ ಶ್ರೀನಿವಾಸ್ ಒತ್ತಾಯಿಸಿದರು.















