ಎಂ.ಎ ನರಸಿಂಹಾಚಾರ್ ಫೌಂಡೇಶನ್ ನಿಂದ ವರ್ಷವಿಡೀ ಸಂಗೀತ ಕಚೇರಿಗಳು: ಎಂ.ಎನ್ ಶ್ರೀಕಿಶನ್

WhatsApp
Telegram
Facebook
Twitter
LinkedIn

ಬೆಂಗಳೂರು: ಎಂ.ಎ ನರಸಿಂಹಾಚಾರ್ ಮ್ಯೂಸಿಕ್ ಫೌಂಡೇಶನ್ ನ ರಜತ ಮಹೋತ್ಸವದ ಅಂಗವಾಗಿ ವರ್ಷವಿಡೀ 25 ವಿಶೇಷ ಸಂಗೀತ ಕಚೇರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಮುಖ್ಯಸ್ಥ ಎಂ.ಎನ್ ಶ್ರೀಕಿಶನ್ ತಿಳಿಸಿದರು.

ಸಂಗೀತ ಭೂಷಣ ಎಂ.ಎ. ನರಸಿಂಹಾಚಾರ್ ಅವರ ಸ್ಮರಣಾರ್ಥ ವಿಶೇಷ ಕಚೇರಿಯನ್ನು ಎಂಇಎಸ್ ಕಲಾವೇದಿಯ ವತಿಯಿಂದ ಮಲ್ಲೇಶ್ವರದ ಕಿಶೋರ್ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2001ರಲ್ಲಿ ನಮ್ಮ ತಂದೆಯವರ ಸಮ್ಮುಖದಲ್ಲಿಯೇ ಎಂ.ಎ. ನರಸಿಂಹಾಚಾರ್ ಮ್ಯೂಸಿಕ್ ಫೌಂಡೇಶನ್ ಸ್ಥಾಪಿಸಲಾಯಿತು. 2004ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಕ್ಕೆ ಅವರು ಭಾಜನರಾಗಿದ್ದರು. ಅವರ ಸ್ಮರಣಾರ್ಥ ಇಂದು ನಡೆದಿರುವ ಸಂಗೀತ ಕಚೇರಿ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರು.

ಸಂಸ್ಥೆಯ ವತಿಯಿಂದ ಪ್ರತಿವರ್ಷ ಮೂವರು ಸಂಗೀತ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ವಿಶೇಷವಾಗಿ ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ತಾಳವಾದ್ಯ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ತಲಾ 10 ಸಾವಿರ ರೂಪಾಯಿ ನಗದು ಪುರಸ್ಕಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದರೊಂದಿಗೆ, ಕರ್ನಾಟಕದ ಪ್ರತಿಭಾವಂತ ಕಲಾವಿದರಿಗೆ ಪ್ರತಿವರ್ಷ ಗಾನವಾರಿಧಿ ಬಿರುದು ನೀಡಿ ಗೌರವಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ, ಸುಮಾರು 20-30 ವರ್ಷಗಳ ಕಾಲ ಕಲಾ ಸೇವೆ ಸಲ್ಲಿಸಿರುವ ಕರ್ನಾಟಕದ ಹಿರಿಯ ಕಲಾವಿದರನ್ನು ಗುರುತಿಸಿ ಶ್ಯಾಮಗಾನ ಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಈ ವರ್ಷ ಪ್ರಸಿದ್ಧ ಕಲಾವಿದರಾದ ಟಿ.ಟಿ. ಶ್ರೀನಿವಾಸನ್ ಅವರು ನವೆಂಬರ್‌ನಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು, ಅತ್ಯಂತ ಸಂತೋಷ ತಂದಿದೆ. ಅವರೊಂದಿಗಿನ ನಮ್ಮ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನುಡಿದರು.

ಇಂದು ಎಂ ಇ ಎಸ್ ಕಲಾವೇದಿ ಮತ್ತುಎಂ.ಎ ನರಸಿಂಹಾಚಾರ್ ಮ್ಯೂಸಿಕ್ ಫೌಂಡೇಶನ್ ಏರ್ಪಡಿಸಿದ್ದ ವಯೊಲಿನ್ ಕಛೇರಿಯಲ್ಲಿ ಪ್ರಸಿದ್ಧ ವಯೊಲಿನ್ ವಿದ್ವಾಂಸರಾದ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಶ್ರದ್ಧೆ ಹಾಗೂ ಶ್ರುತಿಬದ್ಧ ಸಂಗೀತದಿಂದ ಸಭಿಕರನ್ನು ಮನಸೂರೆಗೊಳಿಸಿದ್ದಾರೆ. ಅವರಿಗೆ ಮೃದಂಗದಲ್ಲಿ ಕರ್ನಾಟಕದ ಹೆಮ್ಮೆಯ ವಿದ್ವಾಂಸರಾದ ಪ್ರವೀಣ್ ಅವರು ಸಾಥ್ ನೀಡಿದ್ದು, ಘಟಂನಲ್ಲಿ ವಿದ್ವಾನ್ ಓಂಕಾರ್ ರವರ ವಾದನವು ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.

ಸಂಸ್ಥೆಯ ಸಂಚಾಲಕಿ ಮಾಲಿನಿ ಮಾತನಾಡಿ, ಯುವ ಪೀಳಿಗೆಯಲ್ಲಿ ಭಾರತೀಯ ಕಲೆ ಹಾಗೂ ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಎಂಇಎಸ್ ಕಲಾವೇದಿಕೆಯು ನಿರಂತರವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಎಂಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ರಂಗಶಾಲೆಯ ವತಿಯಿಂದ ಉಚಿತ ನಾಟಕ ಕಾರ್ಯಾಗಾರವನ್ನು ಅತಿ ಪ್ರಸಿದ್ಧ ರಂಗಕರ್ಮಿಗಳಿಂದ ನಡೆಸಲಾಗುತ್ತಿದ್ದು, ಅಲ್ಲದೆ, ಮಕ್ಕಳಲ್ಲಿರುವ ಸಂಗೀತ ಪ್ರತಿಭೆಯನ್ನು ಪ್ರೋತ್ಸಾಹಿಸಲು ಯುವಸಂಗೀತ ಪ್ರತಿಭೆಗಳಿಗೆ ಕಾರ್ಯಕ್ರಮಗಳನ್ನು ಆಯೋಜಿಸಿ, ಕಚೇರಿಗಳನ್ನು ನೀಡಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಸಂಯೋಜನೆಯನ್ನು ಕೂಡ ಪಡೆದುಕೊಳ್ಳಲಾಗಿದ್ದು, ಇದರ ಭಾಗವಾಗಿ ಕಲಾವೇದಿಕೆಯಿಂದ ಶೀಘ್ರದಲ್ಲೇ ಪಿಎಚ್‌ಡಿ ಅಧ್ಯಯನ ಕಾರ್ಯಕ್ರಮವೂ ಪ್ರಾರಂಭವಾಗುತ್ತಿದೆ ಎಂದರು.

ಹಿರಿಯ ವೈಲಿನ್ ವಿದ್ವಾಂಸ ಹಾಗೂ ಭೌತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಟಿ.ಎಸ್.ತಾತಾಚಾರ್ ಅವರ ಸುಪುತ್ರ ಡಾ. ಟಿ.ಟಿ ಶ್ರೀನಿವಾಸನ್ ಅವರು ಕಲಾವೇದಿ ಸಂಸ್ಥೆ ಯ ಸ್ಥಾಪನೆಯ ಉದ್ದೆಶ ಮತ್ತು ಕಲಾಜಗತ್ತಿಗೆ ಅದರ ಕೊಡುಗೆಗಳ ಬಗೆಗೆ ವಿವರಿಸಿದರು ಮತ್ತು ಮಲ್ಲೇಶ್ವರದ ಸಂಗೀತಾಸಕ್ತರ ಸಲುವಾಗಿ ಹಮ್ಮಿಕೊಂಡ ಹಲವಾರು ಕಾರ್ಯಕ್ರಮದ ಬಗೆಗೆ ಶ್ಲಾಘಿಸಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon