ಬೆಂಗಳೂರು: ಉತ್ತರ ಕನ್ನಡ ಜಿಲ್ಲಾ ಅಗೇರ ಸಮಾಜ ಅಭಿವೃದ್ಧಿ ಸಂಘ ಅಂಕೋಲ ವತಿಯಿಂದ ಶ್ರೀರಾಮ ದರ್ಶನ ಯಕ್ಷಗಾನ ಪ್ರದರ್ಶನವನ್ನು ನಗರದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಸಚಿವ ವಿಜಯನಗರದ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ, ಯಕ್ಷಗಾನ ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯ ಅನನ್ಯ ಭಾಗವಾಗಿದೆ. ಒಮ್ಮೆ ಯಕ್ಷಗಾನ ವೀಕ್ಷಿಸಲು ಕುಳಿತರೆ ಎರಡು-ಮೂರು ಗಂಟೆಗಳ ಕಾಲ ತಲ್ಲೀನರಾಗಿ ಅದನ್ನು ಆನಂದಿಸಬಹುದು. ನಾನು ಹಿಂದೆ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಶೈಲಿಯ ಹಲವು ಯಕ್ಷಗಾನ ಪ್ರದರ್ಶನಗಳನ್ನು ವೀಕ್ಷಿಸಿದ್ದೇನೆ. ಇಂತಹ ಸಾಂಸ್ಕೃತಿಕ ಕಲೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಜಗದೀಶ್ ಶಿರೋಡ್ಕರ್ ಅವರು ಮಾದ್ಯಮಗಳ ಜೊತೆ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ರಾಮಾಯಣ-ಮಹಾಭಾರತಗಳಂತಹ ಪೌರಾಣಿಕ ಕಥೆಗಳನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಈ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೃಷ್ಣಪ್ಪನವರು ಕಲಾವಿದರನ್ನು ಪ್ರೋತ್ಸಾಹಿಸಿ, ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧ್ರುವತಾರೆ ಟ್ರಸ್ಟ್ನ ಓಂ ಸತೀಶ್ ಅವರು ಈ ಯಕ್ಷಗಾನ ಪ್ರದರ್ಶನ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯಲು ಮುಖ್ಯ ಕಾರಣಕರ್ತರಾಗಿದ್ದು, ಹಲವು ಗಣ್ಯರು ಹಾಗೂ ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಕ್ಷಗಾನವನ್ನು ಆಸ್ವಾದಿಸುತ್ತಿದ್ದಾರೆ ಎಂದರು
ನಿವೃತ್ತ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮನೋಹರ್ ಆಗೇರ ಮಾತನಾಡಿ, ನಾವು ಬಡತನದಿಂದ ಬಂದಂತವರು. ನಮ್ಮ ವೃತ್ತಿಯಿಂದಲೇ ಆಗೇರ ಎನ್ನುವ ಹೆಸರು ಬಂದಿದೆ. ನಮ್ಮ ಹಿರಿಯರು ಉಪ್ಪಿನ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಗಾಂಧೀಜಿಯವರು ಕರೆಕೊಟ್ಟ ಸಂದರ್ಭದಲ್ಲಿ ಉಪ್ಪಿನ ಸತ್ಯಾಗ್ರಹಕ್ಕಾಗಿ ಆಂಧ್ರದಿಂದ ಸತ್ಯಾಗ್ರಹ ಹಮ್ಮಿಕೊಂಡಂತಹ ಅಂಕೋಲಾದ ನೆಲದಲ್ಲಿ ಬಂದು ನೆಲೆಸಿದರು. ಸಮುದಾಯದ ಹವ್ಯಾಸಗಳು ಒಂದು ಯಕ್ಷಗಾನ, ಇನ್ನೊಂದು ಕಬಡ್ಡಿ. ಮುಖ್ಯವಾಗಿ ಯಕ್ಷಗಾನದಲ್ಲಿ ಸಂಪೂರ್ಣವಾಗಿ ಎಲ್ಲಾ ಕಥಾನಕಗಳನ್ನು ಅಭಿನಯಿಸುವ ಚತುರತೆಯನ್ನು ನಮ್ಮ ಸಮಾಜದವರು ಹೊಂದಿದ್ದಾರೆ. ಆದ್ದರಿಂದಲೇ ನಮಗೆ ರಾಜ್ಯಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು, ಧ್ರುವತಾರೆ ಸಂಸ್ಥೆಯವರು ಹಾಗೂ ಇನ್ನಿತರ ಸಂಸ್ಥೆಗಳು ಕಲಾಪ್ರದರ್ಶನಕ್ಕೆ ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಾಹಿತಿ ಬಿ ಟಿ ಲಲಿತಾ ನಾಯಕ್, ಸಮಾಜದ ಮುಖಂಡರಾದ ದಿವ್ಯ ನಾಯಕ್, ಆಕಾಶವಾಣಿಯ ಶಂಕರನಾರಾಯಣ್, ಯಕ್ಷಗಾನ ಕಲಾಪೋಷಕರಾದ ಶಂಕರಲಿಂಗೇಗೌಡ, ಮೂರ್ತಿ, ಶ್ರೀನಿವಾಸ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.















