ಬೆಂಗಳೂರು: ಫ್ರೀಡಂ ಪಾರ್ಕ್ ನಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಿರುವುದನ್ನ ಖಂಡಿಸಿ ಮತ್ತು ಸಣ್ಣ ವ್ಯಾಪಾರಿಗಳು, ಹೋಟಲ್ ಉದ್ಯಮಿಗಳು ಮತ್ತು ಸಾರ್ವಜನಿಕರ ಪರವಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ಶನಿವಾರ ಖಾಲಿ ಸಿಲಿಂಡರ್ ಪ್ರದರ್ಶನದ ಮೂಲಕ ವಿನೂತನವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಹೆಚ್.ಎಸ್.ಮಂಜುನಾಥ್ ಗೌಡ ಮಾತನಾಡಿ ಚುನಾವಣೆಗೊಸ್ಕರ ದರ ಏರಿಕೆ ಮಾಡದೇ, ಇದೀಗ ವಾಣಿಜ್ಯ ಗ್ಯಾಸ್ ದರ 990ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೀದಿ ಬದಿಯ ಸಣ್ಣ ವ್ಯಾಪಾರಿಗಳು ಮತ್ತು ಹೋಟೆಲ್ ನವರಿಗೆ ಬಹಳ ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಆದರೆ ಇದಕ್ಕೆ ರಾಜ್ಯದಲ್ಲಿ ಆಯ್ಕೆಯಾಗಿರುವ ಬಿಜೆಪಿ ಸಂಸದರು ಮೌನವಹಿಸಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಬಿಜೆಪಿ ಸರ್ಕಾರ ಅಂಧ ಭಕ್ತರಿಗೆ ಗ್ಯಾಸ್ ಬೆಲೆ ಹೆಚ್ಚಳ ಮಾಡಿದರೂ ಅವರು ಸಹಿಸಿಕೊಳ್ಳುತ್ತಾರೆ, ಆದರೆ ಸಾಮಾನ್ಯ ಜನರಿಗೆ ದರ ಕಡಿಮೆ ಮಾಡಿ. ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಗ್ಯಾಸ್ ಪೆಟ್ರೋಲ್ ಸಂಗ್ರಹ ಕೇಂದ್ರ ಸ್ಥಾಪನೆಯಿಂದ ಇಷ್ಟು ದಿನ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿಲ್ಲ, ಆದರೆ ಪಂಚ ರಾಜ್ಯ ಚುನಾವಣೆ ನಂತರ ಗದಾಪ್ರಹಾರ ಮಾಡಿದ್ದಾರೆ. ದರ ಏರಿಕೆಯಿಂದ ಆಹಾರ, ತಿನಿಸುಗಳ ಬೆಲೆ ಹೆಚ್ಚಳವಾಗಲಿದೆ ಇದರಿಂದ ವ್ಯಾಪಾರ ಕುಸಿತವಾಗಲಿದೆ ವ್ಯಾಖ್ಯಾನಿಸಿದರು.
ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ 2 ರೂಪಾಯಿ ಹೆಚ್ಚಾದರೆ ಬೀದಿಗೆ ಬಂದು ಗಲಾಟೆ ಮಾಡುತ್ತಿದ್ದ ಕೇಂದ್ರ ಸಚಿವೆ ಶೋಭ ಕರಾಂದ್ಲಜೆ ಇಂದು 990ರೂಪಾಯಿ ಗ್ಯಾಸ್ ದರ ಏರಿಕೆ ಮಾಡಿದಾಗ ಯಾಕೆ ಮಾತನಾಡುತ್ತಲ್ಲ. ಸಂಸದ ತೇಜಸ್ವಿಸೂರ್ಯ ಅಂತೂ ಕಾಣೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಣ್ಣ ಉದ್ದಿಮೆದಾದರು, ಹೋಟಲ್ ಗಳು ನಂಬಿರುವ ಕೊಟ್ಯಂತರ ಜೀವನ ಬೀದಿ ಪಾಲಾಗಲಿದೆ. ಆರ್ಥಿಕ ಕುಸಿತವಾಗಿ ದೇಶ ಕಂಗಾಲು ಆಗುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಯುವ ಕಾಂಗ್ರೆಸ್ ಸಮಿತಿ ಹೋರಾಟ ಮತ್ತು ಪ್ರತಿಭಟನೆ ಮಾಡಲಿದೆ ಎಂದು ಹೆಚ್.ಎಸ್.ಮಂಜುನಾಥ್ ಗೌಡ ತಿಳಿಸಿದರು.














