ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಡಾ. ರಾಜಕುಮಾರ್ ಕಲಾ ಭವನದಲ್ಲಿ ಭಾನುವಾರ ಕುಮಾರಿ ವರ್ಷಾ ಪಿ ದೇಶಪಾಂಡೆ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆಯಿತು.
ನೃತ್ಯ ಕಲಾನಿಕೇತನದ ಗುರು ವಿದುಷಿ ಧನ್ಯಶ್ರೀ ಅವರ ಗರಡಿಯಲ್ಲಿ ಪಳಗಿರುವ ವರ್ಷಾ ವಿವಿಧ ಸಂಗೀತ, ತಾಳಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನಸೂರೆಗೊಂಡರು. ಹಲವು ವರ್ಷಗಳಿಂದ ನಿರಂತರ ಸಾಧನೆ, ಶಿಸ್ತು ಮತ್ತು ಸಮರ್ಪಣೆಯ ಮೂಲಕ ಭರತನಾಟ್ಯದ ತಂತ್ರ, ತಾಳ, ಅಭಿನಯದ ವೇದಿಕೆ ಪ್ರಸ್ತುತಿಕರಣವನ್ನು ಉತ್ತಮ ಪಾರಂಗತೆಯೊಂದಿಗೆ ಪ್ರಸ್ತುತ ಪಡಿಸಿದರು.
ವಿದೂಷಿ ಪ್ರಭಾ ಕಿಣಿ, ಖ್ಯಾತ ವೈದ್ಯರುಗಳಾದ ಡಾ.ನಾಗಭೂಷಣ್ ಜೆ.ಎಸ್.ಡಾ.ಗಿರಿರಾಜ್ ರಾವ್ ಭರತ ನಾಟ್ಯ ರಂಗಪ್ರವೇಶಕ್ಕೆ ಅತಿಥಿಗಳಾಗಿ ಭಾಗವಹಿಸಿ ಮನಮೋಹಕ ನಾಟ್ಯಕ್ಕೆ ಸಾಕ್ಷಿಯಾದರು. ಪ್ರಶಾಂತ್. ಹೆಚ್. ಹಾಗೂ ಶಾಲಿನಿ ಟಿ ಕೆ ರವರ ಪುತ್ರಿಯಾಗಿರುವ ವರ್ಷ ಭರತನಾಟ್ಯದ ಮೇಲಿನ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ತಮ್ಮ ನೃತ್ಯಯಾನದ ಅವಧಿಯಲ್ಲಿ ಉಡುಪಿ, ಪುತ್ತೂರು ಮಹಾಲಿಂಗೇಶ್ವರ ಜಾತ್ರಾಮಹೋತ್ಸವ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಗುರುವಾರಯೂರು, ಶ್ರೀ ಚಾಮುಂಡೇಶ್ವರಿ,ಮೂಕಾಂಬಿಕೆ ಮಹಾರಥೋತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.
ಧನ್ಯಶ್ರೀ ನೃತ್ಯ ಕಲಾನಿಕೇತನದ ವಿವಿಧ ನೃತ್ಯ ರೂಪಕಗಳು ಮತ್ತು ವಾರ್ಷಿಕ ಕಾರ್ಯಕ್ರಮಗಳಲ್ಲಿ ಸಹ ಸಕ್ರಿಯವಾಗಿ ಭಾಗವಹಿಸಿ ಮೆಚ್ಚುಗೆ ಪಡೆದಿದ್ದಾರೆ. ಅವರ ಕಲಾಸಾಧನೆಗೆ ಕರ್ನಾಟಕ ನಾಟ್ಯ ರತ್ನ, ಕಲಾ ಕುಸುಮ, ನಾಟ್ಯ ಮಯೂರಿ ಹಾಗೂ ನಾಟ್ಯ ಸರಸ್ವತಿ ಪ್ರಶಸ್ತಿಗಳು ಲಭಿಸಿವೆ. ಭರತನಾಟ್ಯ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅವರು, ಸಂಗೀತಾಭ್ಯಾಸದ ಮೂಲಕ ತಮ್ಮ ನೃತ್ಯದಲ್ಲಿ ಇನ್ನಷ್ಟು ಲಯ ಕಂಡುಕೊಂಡಿದ್ದಾರೆ.
ಶೈಕ್ಷಣಿಕವಾಗಿ ವರ್ಷಾ ಅವರು ಪ್ರಸ್ತುತ ಜೈನ್ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರ ಮತ್ತು ಜೈವಿಕ ವಿಜ್ಞಾನ ಮತ್ತುತಂತ್ರಜ್ಞಾನ ವಿಷಯಗಳಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಭರತನಾಟ್ಯದ ಮೇಲಿನ ತಮ್ಮ ಆಸಕ್ತಿಯನ್ನು ಮುಂದುವರಿಸುತ್ತಿದ್ದಾರೆ. ಗುರುಗಳ ಆಶೀರ್ವಾದ, ಪೋಷಕರ ಪ್ರೋತ್ಸಾಹ ಹಾಗೂ ನಿರಂತರ ಅಭ್ಯಾಸದೊಂದಿಗೆ ಅವರು ತಮ್ಮ ಕಲಾಯಾನವನ್ನು ಭಕ್ತಿ, ವಿನಯ ಮತ್ತು ಶಿಸ್ತಿನಿಂದ ಸಾಗಿಸುತ್ತಿದ್ದಾರೆ.
ಕಾರ್ನಾಟಿಕ್ ಸಂಗೀತದ ಪರೀಕ್ಷೆಯಲ್ಲಿ ಯಶಸ್ವಿ:
ಮಹಿಷ ಮರ್ಧಿನಿ, ಭುವನ ಸುಂದರ ವರ್ಣಂ ಹಾಗೂ ಇತರ ನೃತ್ಯ ರೂಪಕಗಳಲ್ಲಿ ದೈವಿಕ ಮತ್ತು ಪೌರಾಣಿಕ ಪಾತ್ರಗಳನ್ನು ಭಾವಪೂರ್ಣವಾಗಿ ನಿರ್ವಹಿಸಿರುವ ವರ್ಷ, ಕಾರ್ನಾಟಿಕ್ ಸಂಗೀತದ ಶಾಸ್ತ್ರೀಯ ಪರೀಕ್ಷೆಗಳನ್ನು ಕೂಡ ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ವಿಶೇಷವಾಗಿದೆ.















