ಕರ್ನಾಟಕದ ಕಾಫಿ ಪರಂಪರೆಯನ್ನು ಸಂಭ್ರಮಿಸಿದ ರಾಜಮನೆತನ; ಬೆರುಂಡಾ ಕಾಫಿ ಅನಾವರಣ

WhatsApp
Telegram
Facebook
Twitter
LinkedIn

ಬೆಂಗಳೂರು: ಹೌಸ್ ಆಫ್ ಬೆರುಂಡಾ ತನ್ನ ಪ್ರೀಮಿಯಂ ಕರ್ನಾಟಕ ಎಸ್ಟೇಟ್ ಕಾಫಿ ಬ್ರ್ಯಾಂಡ್ ಬೆರುಂಡಾ ಕಾಫಿಯನ್ನು ಬೆಂಗಳೂರಿನಲ್ಲಿ ನಡೆದ ವಿಶೇಷ ರಾಜಮನೆತನದ ಶೈಲಿಯ ಸಮಾರಂಭದಲ್ಲಿ ಅನಾವರಣಗೊಳಿಸಿತು.

ಅತಿಥಿಗಳು ಬೆರುಂಡಾ ಕಾಫಿ ಬ್ರ್ಯಾಂಡ್ ನ ಮೊದಲ ಮೂರು ವಿಶೇಷ ಕಾಫಿ ಸಂಗ್ರಹಗಳಾದ ಡ್ರೋಣ, ಅರ್ಜುನ ಮತ್ತು ಗಜೇಂದ್ರವನ್ನು ವಿವಿಧ ಬ್ರೂವಿಂಗ್ ವಿಧಾನಗಳಲ್ಲಿ ಸವಿದು, ಅವುಗಳ ಹಿಂದಿರುವ ಐತಿಹಾಸಿಕ ಕಥನಗಳನ್ನು ತಿಳಿದುಕೊಂಡರು.

ಕಾರ್ಯಕ್ರಮವು ಸಾಂಪ್ರದಾಯಿಕ ಗಣೇಶ ಆರತಿಯೊಂದಿಗೆ ಆರಂಭಗೊಂಡಿತು. ಬಳಿಕ ಮೈಸೂರು ಮಹಾರಾಜಕುಮಾರಿ ಕಾಮಾಕ್ಷಿ ದೇವಿ ವಾಡಿಯಾರ್ ಹಾಗೂ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ. ದಿನೇಶ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ತರಂಗ ಅಕಾಡೆಮಿ ಆಫ್ ಆರ್ಟ್ ವತಿಯಿಂದ ಭರತನಾಟ್ಯ ಪ್ರದರ್ಶನ ಕೂಡ ಈ ಸಂದರ್ಭದಲ್ಲಿ ನಡೆಯಿತು. ಹೌಸ್ ಆಫ್ ಬೆರುಂಡಾದ ಸದಸ್ಯರು ಬ್ರ್ಯಾಂಡ್ ನ ಪರಿಕಲ್ಪನೆ ಮತ್ತು ಉದ್ದೇಶವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಡವಾನ್ ರಾಜವಂಶದ ಮಹಾರಾಜಕುಮಾರ ಆತ್ಮನ್ಯ ದೇವ್, ಪೆರು ದೇಶದ ಕಾನ್ಸುಲ್ ಜನರಲ್ ವಿಕ್ರಂ ಅಯ್ಯರ್, ನಯನತಾರಾ ಉರ್ಸ್, ಹೇಮಾ ಮಂದಣ್ಣ ಸೇರಿದಂತೆ ಕರ್ನಾಟಕದ ಕಾಫಿ, ವಿನ್ಯಾಸ ಹಾಗೂ ಆತಿಥ್ಯ ಕ್ಷೇತ್ರದ ಗಣ್ಯರು ಮತ್ತು ಬಾರಿಸ್ಟಾ ಚಾಂಪಿಯನ್ ಗಳು ಉಪಸ್ಥಿತರಿದ್ದರು. ಬೆರುಂಡಾ ಕಾಫಿ ಅನ್ನು 250 ಗ್ರಾಂ ಗ್ರೌಂಡ್ ಕಾಫಿ ಪ್ಯಾಕ್ ಗಳು ಹಾಗೂ ಐದು ಸಿಂಗಲ್-ಸರ್ವ್ ಪೌರ್-ಓವರ್ ಕಾಫಿ ಸ್ಯಾಶೆಟ್ಗಳ ಬಾಕ್ಸ್ ರೂಪದಲ್ಲಿ ಈ ವೇಳೆ ಪರಿಚಯಿಸಲಾಯಿತು.

ಬೆರುಂಡಾ ಕಾಫಿಯ ಮೊದಲ ಸಂಗ್ರಹವು ಮೂರು ವಿಭಿನ್ನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ರೋಣ – 60:40 ಅನುಪಾತದ ಸನ್-ಡ್ರೈಡ್ ಅರೇಬಿಕಾ-ರೊಬಸ್ಟಾ ಮಿಶ್ರಣ (ಮೀಡಿಯಂ ಡಾರ್ಕ್ ರೋಸ್ಟ್), ಮೈಸೂರಿನ ಚಿನ್ನದ ಅಂಬಾರಿಯನ್ನು ಸತತ 18 ವರ್ಷ ಹೊತ್ತಿದ್ದ ಪ್ರಸಿದ್ಧ ಆನೆ ದ್ರೋಣನ ಗೌರವಾರ್ಥವಾಗಿ ಹೆಸರಿಸಲಾಗಿದೆ. ಅರ್ಜುನ– ಬಿ.ಆರ್. ಹಿಲ್ಸ್ ವಾಶ್ಡ್ ಅರೇಬಿಕಾ (ಮೀಡಿಯಂ ಲೈಟ್ ರೋಸ್ಟ್), 2023ರಲ್ಲಿ ತನ್ನ ಮಾವುತರನ್ನು ಕಾಡಾನೆ ದಾಳಿಯಿಂದ ರಕ್ಷಿಸುವ ವೇಳೆ ಪ್ರಾಣತ್ಯಾಗ ಮಾಡಿದ ಆನೆ ಅರ್ಜುನನ ನೆನಪಿಗಾಗಿ ಹೆಸರಿಡಲಾಗಿದೆ. ಗಜೇಂದ್ರ – ಅಪರೂಪದ ಹನಿ-ಪ್ರೊಸೆಸ್ ಅರೇಬಿಕಾ, ಇಂದಿಗೂ ರಾಜ್ಯ ಸೇವೆಯಲ್ಲಿರುವ ಕುಮ್ಕಿ ಆನೆ ಗಜೇಂದ್ರನ ಹೆಸರಿಗೆ ಸಮರ್ಪಿಸಲಾಗಿದೆ. ಈ ಮೂರೂ ಕಾಫಿಗಳು ಎಎ ಗ್ರೇಡ್, ಚಿಕೋರಿ ರಹಿತ, ರೋಸ್ಟ್ ದಿನಾಂಕದೊಂದಿಗೆ ಹಾಗೂ ಚಿಕ್ಕಮಗಳೂರು, ಬಿ.ಆರ್. ಹಿಲ್ಸ್ ಮತ್ತು ಕೊಡಗು ಪ್ರದೇಶಗಳಿಂದ ಸಂಗ್ರಹಿಸಲ್ಪಟ್ಟಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಹೌಸ್ ಆಫ್ ಬೆರುಂಡಾ ಸಂಸ್ಥಾಪಕಿ ರಾಜಕುಮಾರಿ ಜಯಪಾಲಶ್ರೀ ಅನಿಲ್, ನನ್ನ ತಾಯಿ ತಮ್ಮ ಬಾಲ್ಯದ ದಿನಗಳಲ್ಲಿ ಬೆಳಗಿನ ಜಾವ ಹೊಸದಾಗಿ ತಯಾರಿಸಿದ ಕಾಫಿಯ ಪರಿಮಳದೊಂದಿಗೆ ದಿನ ಆರಂಭವಾಗುತ್ತಿದ್ದ ನೆನಪುಗಳು ಹಚ್ಚಹಸಿರಾಗಿದೆ. ನಮ್ಮ ಕುಟುಂಬದಲ್ಲಿ ಕಾಫಿ ಎಂದರೆ ಕೇವಲ ಪಾನೀಯವಲ್ಲ, ಅದು ತಲೆಮಾರುಗಳನ್ನು ಜೋಡಿಸುವ ಭಾವನಾತ್ಮಕ ಬಾಂಧವ್ಯವಾಗಿದೆ. ಆದ್ದರಿಂದ ನಾವು ಕೇವಲ ಒಂದು ಬ್ರ್ಯಾಂಡ್ ಅನ್ನು ಪರಿಚಯಿಸುತ್ತಿಲ್ಲ, ನಮ್ಮ ಕುಟುಂಬದ ಪರಂಪರೆಯ ಒಂದು ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇವೆ ಎಂದರು.

ಹೌಸ್ ಆಫ್ ಬೆರುಂಡಾದ ಸ್ಥಾಪಕ ಸದಸ್ಯ ಹಾಗೂ ಮೈಸೂರಿನ ಕೊನೆಯ ಮಹಾರಾಜರ ಮರಿ ಮೊಮ್ಮಗ ಧುಷ್ಯಂತ್ ಅನಿಲ್ ಮಾತನಾಡಿ, ಪರಂಪರೆ ಎಂದರೆ ಅದು ಕಾಲದೊಂದಿಗೆ ಬೆಳೆಯುವುದಾಗಿದೆ, ಆಗ ಮಾತ್ರ ಅದರ ಅರ್ಥ ಹೆಚ್ಚಾಗುತ್ತದೆ. ನಾವು ನಮ್ಮ ಇತಿಹಾಸವನ್ನು ಮೆಚ್ಚುವಂತೆ ಮಾತ್ರ ಹೇಳುತ್ತಿಲ್ಲ, ಕರ್ನಾಟಕದ ಕಾಫಿಯ ಶ್ರೇಷ್ಠತೆಯನ್ನು ಸವಿಯುವಂತೆ ಆಹ್ವಾನಿಸುತ್ತಿದ್ದೇವೆ. ಕಾಫಿಯ ಗುಣಮಟ್ಟವೇ ತನ್ನ ಕಥೆಯನ್ನು ಹೇಳುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ಅರಮನೆಯ ಆತಿಥ್ಯ ಸಂಪ್ರದಾಯವನ್ನು ಪ್ರತಿಬಿಂಬಿಸುವಂತೆ, ಕರ್ನಾಟಕದ ವಿವಿಧ ಸಾಂಪ್ರದಾಯಿಕ ಭೋಜನಗಳೊಂದಿಗೆ ಮೂರು ಕಾಫಿಗಳನ್ನೂ ವಿಭಿನ್ನ ರೀತಿಯಲ್ಲಿ ಜೋಡಿಸಿ ಅತಿಥಿಗಳಿಗೆ ಪರಿಚಯಿಸಲಾಯಿತು. ದ್ರೋಣನ್ನನ್ನು ಹಾಲಿನೊಂದಿಗೆ, ಅರ್ಜುನವನ್ನು ಬ್ಲ್ಯಾಕ್ ಕಾಫಿಯಾಗಿ ಹಾಗೂ ಗಜೇಂದ್ರವನ್ನು ಡೆಸರ್ಟ್ ನ ಅಂತಿಮ ಅನುಭವವಾಗಿ ಪರಿಚಯಿಸಲಾಯಿತು.

ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಕಾಫಿ ಸಂಗ್ರಹಗಳನ್ನು ಪರಿಚಯಿಸುವುದು, ನೆರಳು ಆಧಾರಿತ ಕಾಫಿ ಬೆಳೆ ಹಾಗೂ ಸನ್-ಡ್ರೈಡ್ ಪ್ರಕ್ರಿಯೆಯಂತಹ ಸುಸ್ಥಿರ ಕೃಷಿ ಪದ್ಧತಿಗಳಿಗೆ ಆದ್ಯತೆ ನೀಡುವುದು ಮತ್ತು ಕಾಫಿ ಉದ್ಯಮದ ವಿವಿಧ ಹಂತಗಳಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು ಸಂಸ್ಥೆಯ ಪ್ರಮುಖ ಗುರಿಗಳಾಗಿವೆ ಎಂದು ಸಂಸ್ಥಾಪಕರು ಈ ಸಂದರ್ಭದಲ್ಲಿ ತಿಳಿಸಿದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon