ಬೆಂಗಳೂರು: ಫೀಡಂ ಪಾರ್ಕ್ ಅವರಣದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಬಿಜೆಪಿ ಕೇಂದ್ರ ಸರ್ಕಾರದ ರೈತ ವಿರೋಧಿ ಯು.ಎಸ್.ವ್ಯಾಪಾರ ಒಪ್ಪಂದ ರದ್ದು ಮತ್ತು ಎಂ.ಎಸ್.ಪಿ.ಕಾನೂನುಬದ್ದ ಖಾತರಿ ನೀಡಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಸತ್ಯಾಗ್ರಹ ಗುರುವಾರ ಮೂರನೇಯ ದಿನಕ್ಕೆ ಕಾಲಿಟ್ಟಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್.ಮಂಜುನಾಥ್ ಗೌಡ, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಮಾಜಿ ಮಹಾಪೌರ ಜೆ.ಹುಚ್ಚಪ್ಪ, ದೀಪಕ್ ತಿಮ್ಮಯ್ಯ, ನಂದಕುಮಾರ್ ರವರ ಜೊತೆಯಲ್ಲಿ ರಾಜ್ಯದಲ್ಲೆಡೆಯಿಂದ ಆಗಮಿಸಿದ್ದ ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯ ವೇಳೆ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಇಂಡೋ-ಅಮೇರಿಕಾ ವ್ಯಾಪಾರ ಒಪ್ಪಂದದಲ್ಲಿ ಕೇಂದ್ರ ಸರ್ಕಾರ ನಿರ್ಧಾರ ತಪ್ಪು ಎನ್ನುವುದನ್ನು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸತ್ಯಾಗ್ರಹದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಇಂಡೋ-ಅಮೇರಿಕಾ ಒಪ್ಪಂದ ಪ್ರಕಾರ ಸಣ್ಣ, ಸಣ್ಣ ರೈತರಿಗೆ ಆನಾನುಕೂಲವಾಗಲಿದೆ ಎಂದಿದೆ. ಆದರೆ ಅಮೇರಿಕಾದಲ್ಲಿ ಬೇಡವಾದ ವಸ್ತುಗಳನ್ನು ಭಾರತಕ್ಕೆ ತಂದು ಮಾರುವ ಕರಾಳ ಸತ್ಯ ಇದರಲ್ಲಿದೆ, ಇಂತಹ ಗುಲಾಮಗಿರಿ ಪರಿಸ್ಥಿತಿ ತರಲು ಕೇಂದ್ರ ಬಿಜೆಪಿ ಸರ್ಕಾರ ಕಾರಣವಾಗಿದೆ. ಇದರಿಂದ ರೈತರು ಮತ್ತು ವ್ಯಾಪಾರಿಗಳು ಬೀದಿ ಪಾಲುಗಾಲಿದ್ದಾರೆ. ಇದರ ಬಗ್ಗೆ ಮುಕ್ತ ಚರ್ಚೆ ಮಾಡಲು ರಾಜ್ಯಸಭೆಯಲ್ಲಿ ಕೇಳಿದರೆ ಅವಕಾಶ ಕೊಡಲಿಲ್ಲ. ಈ ಒಪ್ಪಂದದಿಂದ ದೇಶಕ್ಕೆ ಧಕ್ಕೆಯಾಗಲಿದೆ ಎಂದರು.
ಅಮೇರಿಕಾ ಅಧ್ಯಕ್ಷ ಹೇಳುತ್ತಾರೆ ಇಂಡೋ-ಪಾಕಿಸ್ತಾನ ಯುದ್ದ ನಿಲ್ಲಿಸಿದೆ ಅಂತ. 1991ರಲ್ಲಿ ಪ್ರಧಾನಿ ಇಂದಿರಾಗಾಂಧಿ ಆಡಳಿತದ ವೇಳೆಯ ಯುದ್ದದಲ್ಲಿ ಅಮೇರಿಕಾವನ್ನು ದಿಟ್ಟವಾಗಿ ಎದುರಿಸಲಾಯಿತು, ಬಾಂಗ್ಲಾ ದೇಶವೆಂಬ ಹೊಸ ರಾಷ್ಟ್ರ ಉದಯವಾಯಿತು. ಪ್ರತಿಯೊಂದು ದಿನ ಪ್ರಮುಖವಾಗಿ ಯುವಶಕ್ತಿಯ ಭವಿಷ್ಯವನ್ನು ರೂಪಿಸುವ ಕೆಲಸವಾಗಬೇಕಿದೆ . ದೇಶ, ರಾಜ್ಯ, ಕುಟುಂಬ ರಕ್ಷಣೆ ಮಾಡುವ ಸಂದರ್ಭ ಬಂದಿದೆ.ಈ ಹೋರಾಟದಲ್ಲಿ ಯುವ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಇಂಡೋ-ಅಮೇರಿಕಾ ಒಪ್ಪಂದ ಕರಾಳ ಒಪ್ಪಂದ ಎನ್ನುವುದನ್ನು ಇನ್ನಷ್ಟು ಜನರಿಗೆ ಮನದಟ್ಟು ಮಾಡಬೇಕಿದೆ. ಆದ್ದರಿಂದ ಯುವ ಕಾಂಗ್ರೆಸ್ ಕಾರ್ಯಕರ್ತರು ಭಯಪಡಬೇಡಬಾರದು ನಾಗರಿಕರ ಪರ ನಿಮ್ಮ ಹೋರಾಟ ನಿರಂತರವಾಗಿರಬೇಕಿದ್ದು, ಧೈರ್ಯದಿಂದ ವಿಶ್ವವನ್ನು ಗೆಲ್ಲಬಹುದು ಎಂಬುದನ್ನು ನೆನಪಿಡಿ ಎಂದು ಕಿವಿಮಾತು ಹೇಳಿದರು.
ಹನುಮಂತರಾಯಪ್ಪ ಮಾತನಾಡಿ, ಯು.ಎಸ್.ರೈತ ವಿರೋಧಿ ಒಪ್ಪಂದ ವಿರುದ್ದ ಕಿಸಾನ್ ನ್ಯಾಯ ಹೋರಾಟವನ್ನು ಯುವ ಕಾಂಗ್ರೆಸ್ ಯಶಸ್ವಿಯಾಗಿಸಿದೆ. ರೈತ ಈ ದೇಶದ ಬೆನ್ನಲುಬು, ರೈತನಿಗೆ ದೇಶದಲ್ಲಿ ಮೊದಲ ಮನ್ನಣೆಯಿದೆ. ಅದರೆ ಬಿಜೆಪಿ ಸರ್ಕಾರದಲ್ಲಿ ರೈತರನ್ನು ಕಡೆಗಣಿಸಲಾಗಿದೆ. ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾಗಾಂಧಿರವರ ಆಡಳಿತದಲ್ಲಿ ರೈತರ ಉತ್ತೇಜನಕ್ಕೆ ಒತ್ತು ನೀಡಿ ಅವರ ಬಾಳಿಗೆ ಬೆಳಕು ನೀಡಲಾಯಿತು. ಮನಮೋಹನ್ ಸಿಂಗ್ ಆಡಳಿತದಲ್ಲಿ ಬೆಂಬಲ ಬೆಲೆ ನೀಡಿ ರೈತರಿಗೆ ಆಸರೆಯಾಗಲಾಯಿತು ಎಂದರು.
ವಿಶ್ವಗುರು ಸ್ಥಾನದಲ್ಲಿ ಭಾರತವಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಮುರುಳಿ ಮನೋಹರ್ ಜೋಷಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ಡೊಡ್ಡ ಡೊಡ್ಡ ವ್ಯಾಪಾರಿಗಳಿಗೆ ಮಣೆ ಹಾಕುತ್ತಿದೆ. ರೈತ ವರ್ಗ, ಕಾರ್ಮಿಕ ವರ್ಗವನ್ನು ಬೀದಿ ಪಾಲು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್.ಎಸ್.ಮಂಜುನಾಥ್ ಗೌಡ ಮಾತನಾಡಿ, ರೈತರು ಈ ದೇಶದ ಜೀವನಾಡಿ. ಇಂದು ಅನ್ನ ನೀಡುವ ಅನ್ನದಾತ ಕೇಂದ್ರ ಸರ್ಕಾರ ರೈತ ವಿರೋಧಿ ಒಪ್ಪಂದದಿಂದ ಕಂಗಾಲುಗಿದ್ದಾನೆ. ಕಳೆದ 12ವರ್ಷಗಳಿಂದ ಬಿಜೆಪಿ ಸರ್ಕಾರ ರೈತ ವಿರೋಧಿ ನಡವಳಿಕೆ ಮತ್ತು ಸರ್ವಾಧಿಕಾರಿ ಆಡಳಿತದಿಂದ ದೇಶದ ಪರಿಸ್ಥಿತಿ ಅಧೋಗತಿ ಇಳಿದಿದೆ. ಮೊದಲು ರೈತ ವಿರೋಧಿ ಯು.ಎಸ್.ವ್ಯಾಪಾರ ಒಪ್ಪಂದ ರದ್ದು ಮಾಡಬೇಕು ಮತ್ತು ಎಂ.ಎಸ್.ಪಿ.ಕಾನೂನು ಬದ್ದ ಖಾತರಿ ನೀಡಬೇಕು ಎಂದು ಆಗ್ರಹಿಸಿದರು.















