ಬೆಂಗಳೂರು: ತಾಯಿ ಭಾಮಾ ಸುರೇಶ್ ಅವರ ನಿರತರ ಪ್ರೋತ್ಸಾಹದಿಂದ ಸುಗನ್ಯಾ ರಾಘವ್ ನೃತ್ಯದ ಬಗ್ಗೆ ಉತ್ಸಾಹ ಬೆಳಸಿಕೊಂಡು, ಚಿಕ್ಕ ವಯಸ್ಸಿನಲ್ಲಿಯೇ ಭಾರತೀಯ ನೃತ್ಯ ಪ್ರಕಾರವಾದ ಭರತನಾಟ್ಯದಲ್ಲಿ ಸಾಧನೆ ಮಾಡಿದ್ದಾರೆ. ಅವರ ಅಪಾರ ಆಸಕ್ತಿ, ಕುಟುಂಬ ಸದಸ್ಯರ ಪ್ರೋತ್ಸಾಹ ಅಲರ್ಪದ್ಮ ನೃತ್ಯಾಲಯದ ಸ್ಥಾಪನೆಗೆ ಕಾರಣ ಎಂದು ಪ್ರಸಿದ್ಧ ನೃತ್ಯಗಾರ್ತಿ, ಕಲಾರಂಗ ನೃತ್ಯ ಶಾಲೆಯ ನಿರ್ದೇಶಕಿ ರಾಧಿಕಾ ರಾಮಾನುಜನ್ ಬಣ್ಣಿಸಿದರು.
ಭಾನುವಾರ ಮಲ್ಲೇಶ್ವರಂನ ಅಲರ್ಪದ್ಮ ನೃತ್ಯಾಲಯದ ವಾರ್ಷಿಕೋತ್ಸವ ತೆಲುಗು ವಿಜ್ಞಾನ ಸಮಿತಿಯ ಕೃಷ್ಣದೇವರಾಯ ಕಲಾಮಂದಿರದಲ್ಲಿ ನಡೆಯಿತು.ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಧಿಕಾ ರಾಮಾನುಜನ್ ಮಾತನಾಡಿ, ಇಂದಿನ ನೃತ್ಯ ಪ್ರದರ್ಶನದಲ್ಲಿ ಚೆನ್ನೈನ ಪ್ರಖ್ಯಾತ ನೃತ್ಯಗಾರ್ತಿ ಗಾಯತ್ರಿ ಶಶಿಧರನ್ ಮತ್ತು ಕರ್ನಾಟಕ ಕಲಾಶ್ರೀ ಮಿನಲ್ ಪ್ರಭು ಅವರ ಛಾಪು ಕಂಡು ಬಂದಿತು. ಅವರುಗಳ ಶಿಷ್ಯೆಯಾದ ಸುಗನ್ಯಾ ರಾಘವ್ ಬಹು ಎತ್ತರಕ್ಕೆ ಭಾರತೀಯ ನೃತ್ಯಪ್ರಕಾರವನ್ನು ತಗೆದುಕೊಂಡು ಹೋಗಲಿದ್ದಾರೆ ಎನ್ನುವುದನ್ನು ಇಂದಿನ ಪ್ರದರ್ಶನ ಸಾಬೀತು ಮಾಡಿತು. ಬಹಳ ಕಡಿಮೆ ಅವಧಿಯಲ್ಲಿ ತಮ್ಮದೇ ಆದ ನೃತ್ಯ ಶಾಲೆಯನ್ನು ಸ್ಥಾಪಿಸಿ, ಅನೇಕ ಮಕ್ಕಳಿಗೆ ಭರತನಾಟ್ಯ ನೃತ್ಯವನ್ನು ಕಲಿಸುವುದರ ಜೊತೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಕಲಿಸಿಕೊಡುತ್ತಿರುವ ಅವರು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ನೃತ್ಯ ಪ್ರದರ್ಶನವು ಸುಗನ್ಯಾ ರಾಘವ್ ಅವರ ಗುರುಗಳಿಂದ ಪಡೆದ ಅತ್ಯುತ್ತಮ ನೃತ್ಯ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಗುರುಗಳ ಮಾರ್ಗದರ್ಶನ ಹಾಗೂ ಮಾದರಿಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಕಲಿಸುವ ಉತ್ಸಾಹವನ್ನು ಅವರು ಹೊಂದಿದ್ದಾರೆ. ಯುವ ಮನಸ್ಸುಗಳನ್ನು ನೃತ್ಯ ಕಲಿಕೆಯಲ್ಲಿ ತೊಡಗಿಸಿಕೊಂಡು ಇಂದು ಪ್ರದರ್ಶಿಸುವ ಮೂಲಕ ಅವರು ಪೋಷಕರು ಮತ್ತು ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದಾರೆ ಎಂದು ಶ್ಲಾಘಿಸಿದರು.
ಅಲರ್ಪದ್ಮ ನೃತ್ಯಾಲಯದ ನಿರ್ದೇಶಕಿ ಸುಗನ್ಯಾ ರಾಘವ್ ಮಾತನಾಡಿ, ರಾಧಿಕಾ ರಾಮಾನುಜನ್ ಅವರಂತಹ ಶ್ರೇಷ್ಠ ನೃತ್ಯಗಾರ್ತಿ ಮುಖ್ಯ ಅತಿಥಿಯಾಗಿ ನಮ್ಮ ವಾರ್ಷಿಕೋತ್ಸವ ಸಮಾರಂಭಕ್ಕೆ ಬಂದಿರುವುದು ಹೆಮ್ಮೆಯ ವಿಷಯ. ನಮ್ಮ ನೃತ್ಯ ಶಾಲೆಯ ಮಕ್ಕಳ ಪ್ರದರ್ಶನವನ್ನು ಅವರು ಮೆಚ್ಚಿಕೊಂಡಿರುವುದು ಇನ್ನಷ್ಟು ಸಂತೋಷ ತಂದಿದೆ. ಇದು ಕೇವಲ ಆರಂಭವಷ್ಟೇ ಆಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಈ ಪ್ರದರ್ಶನಕ್ಕೆ ತೃಪ್ತರಾಗಬಾರದು. ಹೆಚ್ಚಿನ ಸಾಧನೆಗಳಿಗಾಗಿ ಇನ್ನಷ್ಟು ಶ್ರಮವಹಿಸಬೇಕು. ಇಂದಿನ ನೃತ್ಯ ಪ್ರದರ್ಶನದ ಹಿಂದೆ ಕೆಲವೇ ತಿಂಗಳುಗಳ ಅಭ್ಯಾಸವಿದ್ದು, ಭರತನಾಟ್ಯ ನೃತ್ಯವನ್ನು ಹೆಚ್ಚು ನಿಯಮಿತವಾಗಿ ಅಭ್ಯಾಸ ಮಾಡಿ ಎತ್ತರಕ್ಕೆ ಬೆಳೆಯಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ವಿಶೇಷವಾಗಿ ಅಲರ್ಪದ್ಮ ನೃತ್ಯಾಲಯದ ಮಕ್ಕಳು ಹನುಮಾನ್ ಚಾಲೀಸಾ ನೃತ್ಯ, ಲಕ್ಷ್ಮೀ ನರಸಿಂಹವತಾರ ನೃತ್ಯ, ದೇವತಾನೃತ್ಯಗಳನ್ನು ವಿವಿಧ ರಾಗ, ತಾಳಗಳಿಗೆ ಹೆಜ್ಜೆ ಹಾಕಿ ನೃತ್ಯ ಪ್ರದರ್ಶಿಸಿ ನೀಡಿ ನೋಡುಗರ ಮನಸೂರೆಗೊಂಡರು.















