ಬೆಳಗಾವಿ: ಕಳೆದ 6 ವರ್ಷಗಳಿಂದ ಬೆಳಗಾವಿ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಬಸವರಾಜ ಹೆಗ್ಗನಾಯಿಕ ಇವರು ಜನಾನುರಾಗಿ, ಕರ್ತವ್ಯನಿಷ್ಠ ಹಾಗೂ ಸಮರ್ಥ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಜನೋಪಯೋಗಿ ಕಾರ್ಯಗಳ ಮೂಲಕ ಇವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಮೂಲತಃ ಹುಕ್ಕೇರಿ ತಾಲೂಕು ಚಿಕ್ಕಲದಿನ್ನಿ ಗ್ರಾಮದವರಾದ ಹೆಗ್ಗನಾಯಿಕ ಕನ್ನಡ ಸಾಹಿತ್ಯದಲ್ಲಿ ಎಂಎ ಪದವಿ ಪಡೆದಿದ್ದಾರೆ. ಆರಂಭದಲ್ಲಿ ಇವರು ನೈಋತ್ಯ ರೈಲ್ವೆ ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಅಸಿಸ್ಟಂಟ್ ಆಗಿ ತಮ್ಮ ಸೇವಾವಧಿಯನ್ನು ಆರಂಭಿಸಿದರು. ನಂತರ ಕೇಂದ್ರ ಸಶಸ್ತ್ರ ಪಡೆಯಲ್ಲಿ ಸಬ್- ಇನ್ ಸ್ಪೆಕ್ಟರ್ ಆಗಿ ನಿಯುಕ್ತಿಗೊಂಡರು. ನಂತರ 2014ರಲ್ಲಿ ಕೆಎಎಸ್ ಪಾಸು ಮಾಡಿ ಪ್ರೊಬೇಶನರಿ ಆಧಿಕಾರಿಯಾದರು.
ಸೇವಾವಧಿಯಲ್ಲಿ ಕೈಗೊಂಡ ಜನಪರ ಕೆಲಸಗಳು:
ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ತಾಪಂ ಇಒ ಆಗಿ ಇವರು ಕೊರೊನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 2019 ರಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಿಯಂತ್ರಣದಲ್ಲಿ ಹೆಗ್ಗನಾಯಿಕ ಇವರು ಮುಂಚೂಣಿಯಲ್ಲಿ ನಿಂತು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸ್ಥಳೀಯ ಶಾಸಕರು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮನ್ವಯದೊಂದಿಗೆ ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅರ್ಹರಿಗೆ ತಲುಪಿಸಿದ್ದಾರೆ. ತಾಲೂಕಿನಲ್ಲಿನ ಸರ್ಕಾರಿ ಶಾಲೆಗಳು, ಅಂಗನವಾಡಿ, ಪಿಎಚ್‌ಸಿಗಳು, ಸರ್ಕಾರಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆಗೆ ಇವರು ಆದ್ಯತೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ (ಆಡಳಿತ) ಆಗಿ 700ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ನೌಕರರಿಗೆ ಅನುಮೋದನೆ ನೀಡಲು ಕ್ರಮವಹಿಸಿದ್ದು ಮರೆಯಲಾಗದ ಸಂಗತಿಯಾಗಿದೆ. 500 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಅತ್ಯಂತ ಪಾರದರ್ಶಕವಾಗಿ ಮುಂಬಡ್ತಿಯನ್ನು ನೀಡಲು ಇವರು ಶ್ರಮಿಸಿದ್ದಾರೆ. ಜಿಲ್ಲಾ ಪಂಚಾಯತ ಸಂಪನ್ಮೂಲ ಕೇಂದ್ರ ಮಚ್ಚೆ ಕೇಂದ್ರದ ನವೀಕರಣ, ಸಮರ್ಪಕ ಮೇಲ್ವಿಚಾರಣೆ ಮಾಡಲು ಶ್ರಮಿಸಿದ್ದಾರೆ. ಆರ್‌ಡಿಪಿಆರ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿ ನೌಕರರ ಮನೋಬಲ ಹೆಚ್ಚಸಲು ಶ್ರಮಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಕಚೇರಿಯ ವ್ಯವಸ್ಥಿತ ಆಡಳಿತಕ್ಕೆ ಇವರು ಸತತವಾಗಿ ಶ್ರಮಿಸುತ್ತಿದ್ದಾರೆ.
ಮತ್ತಷ್ಟು ಉನ್ನತ ಹುದ್ದೆಗೇರಲು ಅರ್ಹ ಅಧಿಕಾರಿ:
ಸದ್ಯ ಜಿಲ್ಲಾ ಪಂಚಾಯಿತಿಯಲ್ಲಿ ಉಪಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಬಸವರಾಜ ಹೆಗ್ಗನಾಯಿಕ ಇವರು ಮತ್ತಷ್ಟು ಉನ್ನತ ಹುದ್ದೆಗೆ ಏರಲು ಸಂಪೂರ್ಣವಾಗಿ ಸಮರ್ಥರಾಗಿದ್ದಾರೆ. ಸದಾ ಹಸನ್ಮುಖಿಯಾಗಿ ಕರ್ತವ್ಯ ನಿರ್ವಹಿಸುವ ಇವರು ಜಿಲ್ಲೆಯಲ್ಲಿ ಮತ್ತೊಂದು ಉನ್ನತ ಸ್ಥಾನವನ್ನು ಸದ್ಯದಲ್ಲೇ ಅಲಂಕರಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ಪ್ರಜಾನೆರಳು ಪತ್ರಿಕೆಗೆ ತಿಳಿದು ಬಂದಿದೆ. ಆದಷ್ಟು ಬೇಗನೆ ಇವರು ಸರ್ಕಾರದ ಮತ್ತೊಂದು ಉನ್ನತ ಹುದ್ದೆಗೆ ನೇಮಕವಾಗಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲಿ ಎಂಬುದು ಎಲ್ಲರ ಆಶಯವಾಗಿದೆ.













