ಬೆಂಗಳೂರು: 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆ ನಮ್ಮ ಕನ್ನಡ ಭಾಷೆಗಿದೆ ಎಂದು ಮಾಜಿ ಸಚಿವ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ತಿಳಿಸಿದರು.
ಕನ್ನಡ ಸೇನೆ ಕರ್ನಾಟಕ ಸಂಘದ ವತಿಯಿಂದ ರಾಜಾಜಿನಗರದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶಕ್ಕೆ ಮತ್ತು ರಾಜ್ಯಕ್ಕೆ ಅಪಾರ ಕೊಡುಗೆ ನೀಡಿರುವ ದಿಗ್ಗಜರನ್ನು ಈ ಸಂದರ್ಭದಲ್ಲಿ ಸ್ಮರಣೀಯ. ಭಾರತ ರತ್ನ ಎಂ. ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಹಾಗೂ ಸುಮಾರು 1,500 ಕೋಟಿ ರೂ.ಗಳಿಗೂ ಅಧಿಕ ಲಾಭದಲ್ಲಿರುವ ಮೈಸೂರು ಸಾಬೂನು ಕಾರ್ಖಾನೆಯನ್ನು (ಸ್ಯಾಂಡಲ್ ಸೋಪ್ ಫ್ಯಾಕ್ಟರಿ) ನಮ್ಮ ಕ್ಷೇತ್ರದ ಹೊಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾವೇರಿ ನೀರನ್ನು ಕರುಣಿಸಿದ ಹಾಗೂ ವಿಧಾನಸೌಧವನ್ನು ನಿರ್ಮಿಸಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಮತ್ತು ಕನ್ನಡ ಏಕೀಕರಣಕ್ಕೆ ಶ್ರಮಿಸಿದ ಎಸ್. ನಿಜಲಿಂಗಪ್ಪ ಮುಂತಾದ ಮಹನೀಯರ ಸೇವೆ ಸ್ಮರಣಾರ್ಹ. ಇಂತಹ ಮಹನೀಯರನ್ನು ನೆನೆದು ಕನ್ನಡ ಸೇನೆ ಮುಖಂಡರಾದ ಕೆ.ಆರ್. ಕುಮಾರ್ ಅವರ ನೇತೃತ್ವದಲ್ಲಿ ಕಳೆದ 40 ವರ್ಷಗಳಿಂದ ಕನ್ನಡ ಭಾಷೆ ಹಾಗೂ ನಾಡಿನ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡ ಸೇನೆ ಪ್ರತಿವರ್ಷವೂ ವಿಭಿನ್ನವಾಗಿ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು, ಈ ವರ್ಷವೂ ಬೆಳಿಗ್ಗೆ ಸರ್ಕಲ್ ಮಾರಮ್ಮ ದೇವಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ರಥದ ಮೂಲಕ ಅರ್ಥಪೂರ್ಣವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಪರ ಹೋರಾಟಗಳು ಮತ್ತು ಸಂಘಟನೆಯ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ಮಲೇಶ್ವರದ ಮಾರಮ್ಮ ವೃತ್ತದಿಂದ ಬೃಹತ್ ಮೆರವಣಿಗೆ ಮೂಲಕ ಭುವನೇಶ್ವರಿ ದೇವಿಯ ಪ್ರತಿಮೆಯನ್ನು ಓರಿಯಾನ್ ಮಾಲ್ ವರೆಗಿನ ವೃತ್ತದ ವರೆಗೆ ಕರೆ ತರಲಾಯಿತು. ಬೃಹತ್ ಮೆರವಣಿಗೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಲೇಶ್ವರ ಶಾಸಕ ಆಶ್ವಥ ನಾರಾಯಣ ಚಾಲನೆ ನೀಡಿದರು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ರಾಜ್ಯೋತ್ಸವ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ನಿಡಗುಡಿ ಸ್ವಾಮೀಜಿ, ನಟ ಟೆನಿಸ್ ಕೃಷ್ಣ ಸೇರಿದಂತೆ ವಿವಿಧ ಗಣ್ಯರು, ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಕನ್ನಡ ಸೇನೆಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಈ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.













