ಬೆಂಗಳೂರು: ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ. ಮೇಕೆದಾಟು, ಮಹದಾಯಿಯಂತಹ ಕುಡಿಯುವ ನೀರಿನ ಯೋಜನೆಗಳ ಕುರಿತ ರಾಜ್ಯದ ಬವಣೆ ಕೇಂದ್ರಕ್ಕೆ ಕೇಳುತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ದೂರಿದರು.
ಕಾವೇರಿ ನದಿ ರಕ್ಷಣಾ ಸಮಿತಿ, ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ವಿಸ್ಮಯ ಬುಕ್ ಹೌಸ್ ವತಿಯಿಂದ ಇಲ್ಲಿನ ಗಾಂಧಿ ಭವನದಲ್ಲಿ ನಡೆದ ಎಂ.ಕೆ.ವೆಂಕಟರಾಮು ಅವರ ‘ದಿ ಎವರ್ಗ್ರೀನ್ ಕಾವೇರಿ ಕಾನ್ಫ್ಲಿಕ್ಟ್’ ಪುಸ್ತಕ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ಯೋಜನೆಗಳ ವಿಚಾರದಲ್ಲಿ ಇತರೆ ರಾಜ್ಯಗಳು ತಕರಾರು ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹೀಗಿದ್ದರೂ ಗೋವಾ ರಾಜ್ಯದ ಒತ್ತಡದಿಂದಾಗಿ ಮಹದಾಯಿ ಯೋಜನೆಗೆ ಅರಣ್ಯ ಇಲಾಖೆಯ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗದಿರುವುದು ನಮ್ಮ ನಾಡಿನ ದುರಂತವಾಗಿದೆ. ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಸಚಿವರಲ್ಲಿಯೂ ಮನವಿ ಸಲ್ಲಿಸಿದ್ದೇನೆ. ಇನ್ನಾದರೂ ಕೇಂದ್ರ ಸರ್ಕಾರ ನಮ್ಮ ನಾಡಿನ ಬಾಯಾರಿಕೆಯ ಬಗ್ಗೆ ಕಿಂಚಿತ್ತಾದರೂ ಗಮನ ಹರಿಸಲಿ ಎಂದು ಮನವಿ ಮಾಡಿದರು.
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುವ ಸಿಡಬ್ಲ್ಯು ಆರ್ ಸಿ ಹಾಗೂ ಸಿಡಬ್ಲ್ಯು ಎಂಎ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಮತ್ತೊಮ್ಮೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ, ಕಾವೇರಿ ವಿಚಾರದಲ್ಲಿ ನಮ್ಮ ಬವಣೆಯನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮೇಕೆದಾಟು ಯೋಜನೆಯ ಸಂಬಂಧ ಕಾವೇರಿ ವಾಟರ್ ಕಮಿಟಿ ಮುಂದೆ ಎಲ್ಲ ವಿಷಯಗಳನ್ನು ಮಂಡಿಸಲಾಗಿದೆ. ಮೇಕೆದಾಟು ಯೋಜನೆಗೆ ಈಗಾಗಲೇ 2.5 ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದ್ದು, ಉಳಿದ 2.5 ಸಾವಿರ ಹೆಕ್ಟೇರ್ ಪ್ರದೇಶವನ್ನು ಅಂತಿಮಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಡಿಪಿಆರ್ಗೂ ಅರಣ್ಯ ಇಲಾಖೆಯ ಅನುಮತಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಡಿಪಿಆರ್ ಅನುಮೋದನೆಗೆ ಕೇಂದ್ರದ ಮೇಲೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ಆದೇಶ ನೀಡಿರುವುದು ಕೇಂದ್ರಕ್ಕೂ ತಿಳಿದಿದೆ. ಆದರೂ ಸುಖಾಸುಮ್ಮನೆ ವಿಳಂಬ ಮಾಡುತ್ತಿದೆ. ತಮಿಳುನಾಡಿಗಿಂತ ನಮ್ಮ ರಾಜ್ಯದಿಂದಲೇ ಬಿಜೆಪಿಯ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಲಾಭವಾಗಿದೆ. ನಮ್ಮ ರಾಜ್ಯದಿಂದಲೇ ಅತಿ ಹೆಚ್ಚು ಸಂಸದರು ಬಿಜೆಪಿಯಲ್ಲಿದ್ದಾರೆ. ಹೀಗಾಗಿ, ಇತರೆ ವಿಷಯಗಳಲ್ಲಿ ಬೇಕಿದ್ದರೆ ರಾಜಕೀಯ ಮಾಡಲಿ, ಆದರೆ ರಾಜ್ಯದ ಜನರ ನೀರಿನ ಬವಣೆ ನೀಗಿಸಲು ಮತ್ತು ಮೇಕೆದಾಟು ಯೋಜನೆಯನ್ನು ಸಾಕಾರಗೊಳಿಸಲು ಬಿಜೆಪಿ ಸಂಸದರು ನಮ್ಮೊಂದಿಗೆ ಕೈಜೋಡಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಕಾವೇರಿಗಾಗಿ ಶ್ರಮಿಸಿದ ಹಿರಿಯ ಎಂಜಿನಿಯರ್ಗಳು ಹಾಗೂ ತಜ್ಞರ ಮಾರ್ಗದರ್ಶನ ಪಡೆದು ರಾಜ್ಯದ ನೀರಾವರಿ ಯೋಜನೆಗಳಿಗಾಗಿ ಶ್ರಮಿಸಲಾಗುವುದು ಎಂದರು.
ಇದೇ ವೇಳೆ ಕಾವೇರಿ ನೀರಾವರಿ ನಿಗಮದ ನಿವೃತ್ತ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಟಿ. ತಿಮ್ಮೇಗೌಡ ಅವರ ‘ಸೇವಾಪಥ’ ಹಾಗೂ ‘ಮಂಗಲದಿಂದ ಮ್ಯಾಂಚೆಸ್ಟರ್ವರೆಗೆ’ ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಂಘದ ಲಾಂಛನ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಕಾವೇರಿ ನದಿ ರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಕೆ.ರಾಮು, ವಿಧಾನ ಪರಿಷತ್ ಮಾಜಿ ಸದಸ್ಯ ಅ.ದೇವೇಗೌಡ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.













