ಬೆಳಗಾವಿ: ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದವರ ಮೇಲೆ ಮಾಳಮಾರುತಿ ಠಾಣೆಯ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಆರೋಪಿಯು ಸ್ಥಳದಿಂದ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ನವೆಂಬರ್ 1 ರಂದು ಮಾಳಮಾರುತಿ ಪೊಲೀಸ್ ಠಾಣೆಯ ಪಿಎಸ್‌ಐ ಜೆ. ಐ. ದೇವಡಿ ಹಾಗೂ ಸಿಬ್ಬಂದಿಯವರು ಗಸ್ತು ತಿರುಗುತ್ತಿದ್ದ ವೇಳೆ, ಬೆಳಗಾವಿಯ ಗ್ಯಾಂಗವಾಡಿಯ ನಿವಾಸಿ ರಾಂದವ ದತ್ತಾ ಸಕಟ ಎಂಬಾತನು ಶೇಖ್ ಕಾಲೇಜಿನ ಹುಡುಗರ ಹಾಸ್ಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಮಾಹಿತಿ ದೊರೆತಿತ್ತು, ಕೂಡಲೇ ಪೊಲೀಸರು ಆ ಸ್ಥಳದ ಮೇಲೆ ದಾಳಿ ನಡೆಸಿದ್ದನ್ನು ಕಂಡ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ.
ದಾಳಿ ನಡೆಸಿದ ಸ್ಥಳದಿಂದ ವಿವಿಧ ಕಂಪನಿಗಳಿಗೆ ಸೇರಿದ ರಮ್, ವಿಸ್ಕಿ ಹಾಗೂ ಬಿಯರ್ ಟೆಟ್ರಾ ಪೌಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಅಕ್ರಮ ಸರಾಯಿಯ ಒಟ್ಟು ಮೌಲ್ಯ ಅಂದಾಜು 44 ಸಾವಿರ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ, ಕರ್ನಾಟಕ ಅಬಕಾರಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗಾಗಿ, ಮುಂದಿನ ಕಾನೂನು ಕ್ರಮಕ್ಕಾಗಿ ತನಿಖೆ ಮುಂದುವರೆಸಲಾಗಿದೆ.
ಅಕ್ರಮ ಮದ್ಯ ಮಾರಾಟದ ವಿರುದ್ಧ ಯಶಸ್ವಿ ದಾಳಿ ನಡೆಸಿ, ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪಿಎಸ್‌ಐ ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಹಾಗೂ ಸಂಬಂಧಪಟ್ಟ ಡಿಸಿಪಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.













