ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಮತಾ ಬಿ ತಿಳಿಸಿದರು.
ಮೌಲ್ಯಮಾಪನ ಪ್ರಕ್ರಿಯೆಯ ಸುಧಾರಣೆಯ ಕುರಿತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ನಡೆದ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಸೇರ್ಪಡೆಯಾಗುವ ಅತಿಥಿ ಉಪನ್ಯಾಸಕರು ಹಾಗೂ ಹಿರಿಯ ಉಪನ್ಯಾಸಕರಿಗೆ ಪರೀಕ್ಷಾ ಪದ್ಧತಿಯ ಬದಲಾವಣೆಗಳ ಕುರಿತು ಅರಿವು ಮೂಡಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು.
ಹಿಂದಿನಂತೆ ಕೇವಲ ಐದರಿಂದ ಹತ್ತು ಪ್ರಶ್ನೆಗಳನ್ನು ನೀಡಿ ಉತ್ತರಿಸುವ ಬದಲು, ಇತ್ತೀಚಿನ ಶೈಕ್ಷಣಿಕ ಧೋರಣೆಗೆ ತಕ್ಕಂತೆ ಸುಲಭ, ಮಧ್ಯಮ ಹಾಗೂ ಕಠಿಣ ಮಟ್ಟದ ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕುರಿತು ಕಾರ್ಯಗಾರದಲ್ಲಿ ಚರ್ಚಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕ್ರಿಟಿಕಲ್ ಥಿಂಕಿಂಗ್ ಮತ್ತು ಲಾಜಿಕಲ್ ರೀಸನಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಶ್ನೆ ಪತ್ರಿಕೆಗಳ ಗುಣಮಟ್ಟವನ್ನು ಸುಧಾರಿಸಲು ಈ ಕಾರ್ಯಾಗಾರ ಸಹಕಾರಿಯಾಗಿದೆ. ಅತಿಥಿ ಉಪನ್ಯಾಸಕರು ಹಾಗೂ ಹೊಸ ಬೋಧಕರಿಗೆ ಹಿರಿಯ ಶಿಕ್ಷಕರ ಮಾರ್ಗದರ್ಶನದೊಂದಿಗೆ ಮೌಲ್ಯಮಾಪನ ಮತ್ತು ಪ್ರಶ್ನೆ ಪತ್ರಿಕೆ ಸಿದ್ಧತೆಯ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಸಿಜಿಪಿಎ ಗ್ರೇಡಿಂಗ್ ಸಿಸ್ಟಮ್ ಜಾರಿಯಲ್ಲಿದ್ದು, ಶೇಕಡವಾರು ಅಂಕಗಳನ್ನು ಪಡೆದ ಬಳಿಕ ಗ್ರೇಡಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಮೂರು ಕಾಲೇಜುಗಳು ಸೇರಿದ ಕ್ಲಸ್ಟರ್ ವಿಶ್ವವಿದ್ಯಾಲಯ ನಮ್ಮದಾಗಿದ್ದು, ಇಲ್ಲಿ ಸುಮಾರು 80ಕ್ಕೂ ಅಧಿಕ ಖಾಯಂ ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಕೆಲಸದ ಹೊರೆ ಹಾಗೂ ಸ್ವಯಂ-ಹಣಕಾಸು ಕೋರ್ಸ್ಗಳ ಅವಶ್ಯಕತೆಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳಿಗೆ ಕನಿಷ್ಠ ಮೂರು ವರ್ಷಗಳ ಬೋಧನಾ ಅನುಭವವಿರುವ ಅಧ್ಯಾಪಕರನ್ನು ಮಾತ್ರ ನಿಯೋಜಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದಿಂದ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಹಾಗೂ ವೇತನ ಅನುದಾನ ಬಿಡುಗಡೆಯಾಗಿದೆ. ಅತಿಥಿ ಉಪನ್ಯಾಸಕರ ಗೌರವಧನ ಪಾವತಿ ಸಂಬಂಧ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ಅವರಿಗೆ ಸಕಾಲದಲ್ಲಿ ಗೌರವಧನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಇನ್ನು ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವ ಆದಷ್ಟು ಬೇಗ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಕುಲಪತಿಗಳ ಬದಲಾವಣೆ ಹಾಗೂ ಇತರೆ ಆಡಳಿತಾತ್ಮಕ ಕಾರಣಗಳಿಂದಾಗಿ ವಿಳಂಬವಾಗಿದ್ದು, ರಾಜ್ಯಪಾಲರ ಅಪಾಯಿಂಟ್ಮೆಂಟ್ ಸಿಕ್ಕ ಕೂಡಲೇ ಘಟಿಕೋತ್ಸವವನ್ನು ನಡೆಸಲಾಗುವುದು ಎಂದು ಪ್ರೊ. ಮಮತಾ ಬಿ ಮಾಹಿತಿ ನೀಡಿದರು.













