ಬೆಂಗಳೂರು: ಬದಲಾಗುತ್ತಿರುವ ಜಗತ್ತು ಮತ್ತು ತಂತ್ರಜ್ಞಾನದ ಯುಗದಲ್ಲಿ ಮೌಲ್ಯಮಾಪನ ಪ್ರಕ್ರಿಯೆಯ ಪರಿಷ್ಕರಣೆ ಅತ್ಯಂತ ಅವಶ್ಯಕ ಎಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ವೈ. ರಮೇಶ್ ಅಭಿಪ್ರಾಯಪಟ್ಟರು.
ಮೌಲ್ಯಮಾಪನ ಪ್ರಕ್ರಿಯೆಯ ಸುಧಾರಣೆಯ ಕುರಿತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ನಡೆದ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳು ಮೂರು ತಿಂಗಳುಗಳ ಪಾಠ ನಡೆಸಿ ವಿದ್ಯಾರ್ಥಿಗಳಿಗೆ ಮೂರು ಗಂಟೆಗಳಲ್ಲಿ ಪರೀಕ್ಷೆ ಬರೆಯಲು ನಿರ್ದೇಶಿಸುತ್ತವೆ. ಈ ಪರೀಕ್ಷೆಗಳನ್ನು ಉಪನ್ಯಾಸಕರು ಮೌಲ್ಯಮಾಪನ ಮಾಡಿ ಪದವಿ ಪ್ರಮಾಣಪತ್ರವನ್ನು ನೀಡುವ ಕಾರ್ಯವನ್ನು ಪ್ರತ್ಯಕವಾಗಿರುವ ಅಲ್ಲಿನ ಮೌಲ್ಯಮಾಪನ ಕೇಂದ್ರವು ನಿರ್ವಹಿಸುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಕೆಲವು ಸಣ್ಣ ಪುಟ್ಟ ಲೋಪ ದೋಷಗಳು ಉಂಟಾಗುತ್ತಿದ್ದು, ಅಂತಹ ಸಣ್ಣ ತಪ್ಪುಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅಪಾರ ಪರಿಣಾಮ ಬೀರುತ್ತವೆ ಎಂದರು.
ಕಡಿಮೆ ಅಂಕಗಳು ಬಂದವರು ಹೆಚ್ಚಿಗೆ ಬರಬೇಕಾಗಿತ್ತು ಎಂದು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುತ್ತಾರೆ. ಮರುಮೌಲ್ಯಮಾಪನಕ್ಕಾಗಿ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಮತ್ತು ಫೋಟೋಕಾಪಿ ಪಡೆಯಲು ಕೂಡ ಶುಲ್ಕ ಪಾವತಿಸಬೇಕಾಗುತ್ತದೆ. ಅಂತಿಮ ಫಲಿತಾಂಶದಲ್ಲಿ ಮರುಮೌಲ್ಯಮಾಪನದಿಂದ ಕಡಿಮೆ ಅಂಕಗಳಿಗಿಂತ ಹೆಚ್ಚಿಗೆ ಬಂದಾಗ ವಿದ್ಯಾರ್ಥಿಗಳು ಖುಷಿಪಟ್ಟರೂ ತಾವು ಕಳೆದುಕೊಂಡ ಅಮೂಲ್ಯ ಮೊತ್ತವನ್ನು ಕಳೆದುಕೊಂಡಿರುತ್ತಾರೆ. ಇಲ್ಲಿ ಬರುವ ವಿದ್ಯಾರ್ಥಿಗಳು ವಿಶೇಷವಾಗಿ ಪ್ರಥಮ ತಲೆಮಾರಿನವರಾಗಿದ್ದು, ಹಳ್ಳಿಗಳಿಂದ ಬರುವವರು ಹಾಗೂ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅರಿಯದ ಹಿನ್ನೆಲೆಯವರಾಗಿರುತ್ತಾರೆ ಎಂದರು.
ಈ ವಿದ್ಯಾರ್ಥಿಗಳಿಗೆ ಕೇವಲ ಅಂಕಗಳನ್ನು ನೀಡುವ ಸಂಸ್ಥೆಯಾಗಿ ಮಾತ್ರ ವಿಶ್ವವಿದ್ಯಾಲಯವಿರದೆ, ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರದ ಜೊತೆಗೆ ಮುಂದಿನ ದಿನಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರಿಪೂರ್ಣ ಮಾರ್ಗದರ್ಶನವನ್ನು ನೀಡುವಂತಹ ಕೆಲಸ ವಿಶ್ವವಿದ್ಯಾಲಯದಿಂದ ಆಗಬೇಕಿದೆ. ಮೌಲ್ಯಮಾಪನ ಅನ್ನುವುದು ಒಂದು ಕಲಿಕಾ ಪ್ರಕ್ರಿಯೆ ಮತ್ತು ಹೊಣೆಗಾರಿಕೆಯನ್ನು ತಿಳಿಸುವಂತಹುದಾಗಿದೆ. ಬದಲಾಗುತ್ತಿರುವ ಜಗತ್ತು ಮತ್ತು ತಂತ್ರಜ್ಞಾನದ ಯುಗದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಅತ್ಯಂತ ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿದರು.
ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತಂದುಕೊಂಡು ತಂತ್ರಜ್ಞಾನವನ್ನು ಬಳಸಿಕೊಂಡು ಯಾರಿಗೂ ಕೂಡ ಅನ್ಯಾಯವಾಗದಂತೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಬೇಸರವಾಗದಂತೆ ಪ್ರಾಧ್ಯಾಪಕರಿಗೆ ಜವಾಬ್ದಾರಿಯನ್ನು ನಿಗದಿಪಡಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ಡಾ.ವೈ. ರಮೇಶ್ ಹೇಳಿದರು.













