ಬೆಂಗಳೂರು: ಸುಮಾರು 39 ವರ್ಷಗಳ ರಾಜಕೀಯ ಪಯಣದ ಬಳಿಕ ನನಗೆ ದೊರೆತಿರುವ ಹೊಸ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ನೂತನ ಸಭಾಪತಿ ಸಲೀಂ ಅಹ್ಮದ್ ಹೇಳಿದರು.
ಕನ್ನಡ ಶ್ರೀಸಾಮಾನ್ಯರ ಕೂಟದ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಹುದ್ದೆಗಳು ಬದಲಾಗಬಹುದು, ಜವಾಬ್ದಾರಿಗಳು ಹೆಚ್ಚಾಗಬಹುದು. ಆದರೆ ಜನರ ಪ್ರೀತಿ, ವಿಶ್ವಾಸ ಮತ್ತು ಸಮಾಜದ ಸೇವೆ ಮಾಡುವ ಸಂಕಲ್ಪವೇ ಒಬ್ಬ ನಾಯಕನ ನಿಜವಾದ ಶಕ್ತಿಯಾಗಿದೆ. ನಾನು ಇದುವರೆಗೆ ಮೈದಾನದಲ್ಲಿ ಆಟಗಾರನಾಗಿ ಕಾರ್ಯನಿರ್ವಹಿಸಿದ್ದೆ. ಈಗ ಅಂಪೈರ್ ಅಥವಾ ತೀರ್ಪುಗಾರನ ಸ್ಥಾನದಲ್ಲಿದ್ದೇನೆ. ಈ ಹುದ್ದೆಯ ಘನತೆಯನ್ನು ಕಾಪಾಡುವುದರ ಜೊತೆಗೆ ಅತ್ಯಂತ ಎಚ್ಚರಿಕೆ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಭಾಪತಿ ಸ್ಥಾನಕ್ಕೆ ತನ್ನದೇ ಆದ ಅಧಿಕಾರ ಮತ್ತು ಮಹತ್ವವಿದೆ. ಆದರೆ ಅದರೊಂದಿಗೆ ದೊಡ್ಡ ಜವಾಬ್ದಾರಿಯೂ ಇದೆ. ಈ ಸ್ಥಾನದಲ್ಲಿ ಪಕ್ಷ ರಾಜಕಾರಣಕ್ಕೆ ಅವಕಾಶವಿಲ್ಲದಿದ್ದರೂ, ಸಮಾಜದ ಹಿತಕ್ಕಾಗಿ ಮತ್ತು ಜನರ ನಿರೀಕ್ಷೆಗಳನ್ನು ಈಡೇರಿಸಲು ಮಹತ್ವದ ವೇದಿಕೆಯಾಗಿದೆ. ತಮ್ಮನ್ನು ಸಚಿವರಾಗಿ ನೋಡಬೇಕೆಂದು ಅನೇಕ ಹಿತೈಷಿಗಳು ಹಾರೈಸಿದ್ದರು. ಅವರ ಪ್ರಾರ್ಥನೆ ಮತ್ತು ಆಶೀರ್ವಾದದಿಂದ ತಮಗೆ ಸಚಿವ ಸ್ಥಾನಕ್ಕಿಂತ ವಿಭಿನ್ನವಾದ ಮಹತ್ವದ ಜವಾಬ್ದಾರಿ ದೊರೆತಿದೆ ಎಂದು ಹೇಳಿದರು.
ನನ್ನ ಮೇಲೆ ಎಲ್ಲ ಸಮುದಾಯಗಳ ಜನರು ತೋರಿಸುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ಯಾವುದೇ ಪಕ್ಷದ ಚೌಕಟ್ಟಿಗೆ ಸೀಮಿತವಾಗದೆ ಎಲ್ಲರ ಸೇವೆ ಮಾಡುವುದು ನನ್ನ ಕರ್ತವ್ಯವಾಗಿದೆ. ಈ ಜವಾಬ್ದಾರಿಯನ್ನು ಸಮರ್ಪಣಾ ಮನೋಭಾವದಿಂದ ನಿರ್ವಹಿಸುತ್ತೇನೆ. ಎಲ್ಲರ ಪ್ರಾರ್ಥನೆ ಮತ್ತು ಸಹಕಾರ ನನಗೆ ಬೇಕು ಎಂದು ಸಲೀಂ ಅಹ್ಮದ್ ತಿಳಿಸಿದರು.
ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ. ಪಾರ್ಶ್ವನಾಥ ಅವರು ತಮ್ಮ ಆಶಯ ನುಡಿಯಲ್ಲಿ, ವಿವಿಧ ಧರ್ಮ ಮತ್ತು ಸಮುದಾಯಗಳ ಜನರು ಯಾವುದೇ ಭೇದಭಾವವಿಲ್ಲದೆ ಒಂದೇ ವೇದಿಕೆಯಲ್ಲಿ ಸೇರಿರುವುದು ನಿಜವಾದ ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ. ಗಾಂಧಿ ಭವನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷ ಮಹತ್ವ ಹೊಂದಿದೆ. ಗಾಂಧೀಜಿಯವರ ತತ್ವ ಮತ್ತು ಮೌಲ್ಯಗಳನ್ನು ಗೌರವಿಸುವ ಸಲೀಂ ಅಹ್ಮದ್ ಅವರ ವ್ಯಕ್ತಿತ್ವ ಕೂಡ ಅಷ್ಟೇ ವಿಶೇಷವಾಗಿದೆ ಎಂದರು.
ಖ್ಯಾತ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೌಲಾನ ಮುಫ್ತಿ ಡಾ. ಮಕ್ಸೂದ್ ಇಮ್ರಾನ್ ರಶಾದಿ ಹಾಗೂ ಚನ್ನಬಸವ ಮಹಾಸ್ವಾಮಿಗಳು ಸಲೀಂ ಅಹ್ಮದ್ ಅವರನ್ನು ಅಭಿನಂದಿಸಿದರು. ಮಾಜಿ ಸಚಿವೆ ಡಾ. ಜಯಮಾಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ. ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ವಾನ್ ಖಾಸಿಮ್ ಮಲ್ಲಿಗೆ ಮಡುವು ಕನ್ನಡ ಗೀತೆಗಳನ್ನು ಹಾಡಿದರು. ಎಸ್. ಪಿನಾಕಪಾಣಿ ಕಾರ್ಯಕ್ರಮ ನಿರ್ವಹಿಸಿದರು. ಹಾಜಿರಾ ಖಾನಂ ಕನ್ನಡದಲ್ಲಿ ಅಭಿನಂದನಾ ಪತ್ರ ವಾಚಿಸಿದರು. ಈ ವೇಳೆ ಸಲೀಂ ಅಹ್ಮದ್ ಅವರಿಗೆ ಸಾಂಪ್ರದಾಯಿಕ ಕನ್ನಡ ಪೇಟ ತೊಡಿಸಿ ಗೌರವಿಸಲಾಯಿತು.













