ಬೆಂಗಳೂರು: ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಯುವ ಕಲಾವಿದ ತೀರ್ಥೋ ಬ್ಯಾನರ್ಜಿ ಅವರ ಮೊದಲ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ನವೆಂಬರ್ 5 ರವರೆಗೆ ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಲಾ ಪ್ರೇಮಿಗಳು ಈ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.
ಚಿತ್ರಕಲಾ ಪರಿಷತ್ತಿನ ಗ್ಯಾಲರಿ ಹಾಲ್ 3 ಮತ್ತು 4 ರಲ್ಲಿ ನಡೆಯುತ್ತಿರುವ ಈ ಪ್ರದರ್ಶನದಲ್ಲಿ, ಕಳೆದ ಎರಡು ವರ್ಷಗಳ ತೀರ್ಥೋ ಬಾನರ್ಜಿ ಅವರ ಶ್ರಮದ ಪ್ರತಿಫಲನವಾಗಿರುವ ‘ವೈಲ್ಡ್ ಸೊಸೈಟಿ’ ಎಂಬ ವಿಶಿಷ್ಟ ಕಲಾ ಸರಣಿಯನ್ನು ಪ್ರದರ್ಶಿಸಲಾಗಿದೆ. ಅಕ್ರಿಲಿಕ್, ವಾಟರ್ ಕಲರ್ ಮತ್ತು ಚಾರ್ಕೋಲ್ ಬಳಸಿ ಇಲ್ಲಿನ ಚಿತ್ರಕಲಾಕೃತಿಗಳನ್ನು ರಚಿಸಲಾಗಿದೆ. ಮುಖ್ಯವಾಗಿ ವನ್ಯಜೀವಿ ಪ್ರಾಣಿಗಳ ಜೊತೆ ಜೊತೆಗೆ ಮಾನವ ಸಮಾಜದ ನಡವಳಿಕೆಗಳು, ವಿವಿಧ ಪತ್ರಾಭಿನಯಗಳು ಮತ್ತು ಅವುಗಳಿಗೆ ಸಂಬಂಧಿಸಿದ ಭಾವನೆಗಳು, ವಿಭಿನ್ನ ಆಕಾರಗಳು ಹಾಗೂ ವಿನ್ಯಾಸಗಳು ಈ ಚಿತ್ರಕಲಾಕೃತಿಗಳಲ್ಲಿ ಪ್ರತಿಫಲಿಸುತ್ತಿವೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತಾಡಿದ ಚಿತ್ರ ಕಲಾವಿದ ತೀರ್ಥೋ ಬ್ಯಾನರ್ಜಿ ಪ್ರದರ್ಶನಗೊಳ್ಳುತ್ತಿರುವ ಪ್ರತಿಯೊಂದು ಚಿತ್ರಕ್ಕೂ ತನ್ನದೇ ಆದ ವಿಶಿಷ್ಟ ಕಥೆಯಿದ್ದು, ಗಾತ್ರ ಮತ್ತು ವಸ್ತುವಿನ ಸ್ವರೂಪಕ್ಕೆ ತಕ್ಕಂತೆ ಪೂರ್ಣರೂಪಕ್ಕೆ ತರಲು ತಿಂಗಳುಗಳ ಶ್ರಮವನ್ನು ವ್ಯಯಿಸಿದ್ದೇನೆ. ಇಲ್ಲಿನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತಿರುವ ಚಿತ್ರಕಲಾಕೃತಿಗಳ ಬೆಲೆಯು ಅವುಗಳ ಗಾತ್ರ ಮತ್ತು ಪರಿಕಲ್ಪನೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಉದಾಹರಣೆಗೆ 8×8 ಇಂಚಿನ ಸಣ್ಣ ಅಳತೆಯ ಕಲಾಕೃತಿಗಳ ಬೆಲೆಯು ಸುಮಾರು 6 ಸಾವಿರ ರೂಪಾಯಿಗಳಿಂದ ಆರಂಭವಾಗುತ್ತದೆ ಎಂದು ಮಾಹಿತಿ ನೀಡಿದರು.
ಈವರೆಗೆ ಸಾರ್ವಜನಿಕರಿಂದ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಸಾಕಷ್ಟು ಜನರು ಭೇಟಿ ನೀಡಿ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಮಾರಾಟ ಕೂಡ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಕಲಾಸಕ್ತರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಶಿಷ್ಟ ಚಿತ್ರಕಲಾ ಲೋಕದ ಅನುಭವವನ್ನು ಪಡೆಯಬೇಕು ಎಂದರು.
ಡುವಾರ್ಟೆ ಹೌಸ್ ಸಂಸ್ಥೆಯ ಸಂಸ್ಥಾಪಕರಗಳಾದ ದಿವ್ಯಾ ಮುರಳಿ ಮತ್ತು ಹೆನ್ನಾ ಬಜಾಜ್ ಅವರಿಂದ ಈ ವೈಲ್ಡ್ ಸೊಸೈಟಿ ವಿಶಿಷ್ಟ ಚಿತ್ರಕಲಾ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದು, ಅವರುಗಳು ಸಹ ಮಾಧ್ಯಮ ಸಂವಹನದ ವೇಳೆ ಉಪಸ್ಥಿತರಿದ್ದರು.














