ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರಿಂದ ಪ್ರತಿಭಟನೆ

WhatsApp
Telegram
Facebook
Twitter
LinkedIn

ಬೆಂಗಳೂರು: ಕರವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್‌, ನೀರು ಗಂಟಿಗಳನ್ನು ಸರ್ಕಾರಿ ನೌಕರರೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು. ಐದು ವರ್ಷ ಸೇವೆ ಸಲ್ಲಿಸಿರುವ ನೌಕರರಿಗೆ ದಿನಕ್ಕೆ 750 ರೂಪಾಯಿ, 10 ವರ್ಷ ಮೇಲ್ಪಟ್ಟವರಿಗೆ 1,500 ರೂಪಾಯಿ, 15 ವರ್ಷ ಮೇಲ್ಪಟ್ಟವರಿಗೆ 3,000 ರೂಪಾಯಿ ನೀಡಬೇಕು. ಆರ್ಥಿಕ ಇಲಾಖೆಗೆ ಕಡತ ಹೋಗಿದ್ದು, ಶೀಘ್ರ ಜಾರಿಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಈ ವೇಳೆ ಸಂಘದ ಅಧ್ಯಕ್ಷ ಎಂ.ಬಿ.ನಾಡಗೌಡ ಮಾತನಾಡಿ, ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ 5 ಲಕ್ಷ ಇಡಿಗಂಟು ಕೊಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ನಿರ್ಣಯದ ಮೂಲಕ ನೇಮಕಾತಿಯಾಗಿರುವ ಸಿಬ್ಬಂದಿಗೆ ಜಿಲ್ಲಾ ಪಂಚಾಯಿತಿ ಅನುಮೋದನೆ ಆಗದಿದ್ದರೂ ಅವರಿಗೂ ಇಡಿಗಂಟು ನೀಡಲು ಆದೇಶಿಸಬೇಕು. ಈಗ ಎರಡನೇ ಡಾಟಾ ಎಂಟ್ರಿ ಅಪರೇಟರ್‌ ಹುದ್ದೆಗೆ ಅವಕಾಶ ನೀಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಅಪರೇಟರ್‌ಗಳನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಖಾಲಿ ಇರುವ ಕರ ವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರ ಹುದ್ದೆಗಳನ್ನು ಭರ್ತಿ ಮಾಡಬೇಕು. ಪಂಚಾಯಿತಿಗಳಿಗೆ ಲೆಕ್ಕ ಸಹಾಯಕ ಹುದ್ದೆಗಳನ್ನು ಸೃಜಿಸಬೇಕು. ಗ್ರೇಡ್‌–1 ಕಾರ್ಯದರ್ಶಿಗಳಿಂದ ಪಿಡಿಒ ಹುದ್ದೆಗೆ ರಾಜ್ಯ ಮಟ್ಟದಲ್ಲಿ ಕೊಡುವ ಮುಂಬಡ್ತಿಯನ್ನು ಕೈ ಬಿಟ್ಟು ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಬಿಲ್ ಕಲೆಕ್ಟರ್‌ ಮತ್ತು ಗುಮಾಸ್ತ ವೃಂದದಿಂದ ಗ್ರೇಡ್ –2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ನೇಮಕಗೊಂಡ ನೌಕರರಿಗೆ ಕೆಸಿಎಸ್‌ಆರ್ 325 ನಿಯಮಾನುಸಾರ ಹಿಂದಿನ ಸೇವೆ ಪರಿಗಣಿಸಿ ಹಳೆ ಪಿಂಚಣಿ ಜಾರಿ ಮಾಡಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಶೇಕಡ 60ರಷ್ಟು ಸ್ಥಾನವನ್ನು ಗ್ರೇಡ್‌ 1 ಕಾರ್ಯದರ್ಶಿಗೆ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ಜೈನೆಖಾನ್, ಉಪಾಧ್ಯಕ್ಷರುಗಳಾದ ಆರ್.ಎಸ್ ಬಸವರಾಜ, ಗೋಪಾಲಕೃಷ್ಣ ಅರಳಹಳ್ಳಿ, ಜಿ ರಾಮಕೃಷ್ಣ, ಖಜಾಂಚಿ ಮಲ್ಲಿಕಾರ್ಜುನ ಯಾದಗಿರಿ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಪದಾಧಿಕಾರಿಗಳಾದ ಬಿ.ಐ ಈಳಗೇರ, ಎಸ್. ರೇಖಾ, ಶೋಭಾ ಪಾಂಡರೆ, ಹೊಳೆಬಸವ, ಸಿದ್ಧರಾಜು, ಪಿ. ಭರತ್, ಮುತ್ತು ಪೂಜಾರ, ರಾಜೇಸಾಬ್, ಚಂದ್ರಶೇಖರಗೌಡ, ಎಂ. ಗೋಪಾಲ ಪಾಲ್ಗೊಂಡಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon