ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಪಿಯು ಉಪನ್ಯಾಸಕರ ಸೇವಾ ವ್ಯಾಪ್ತಿಯನ್ನು 9ನೇ ಹಾಗೂ 10ನೇ ತರಗತಿಗಳ ಭೋದನೆಗೂ ವಿಸ್ತರಿಸಲು ಉದ್ದೇಶಿಸಿರುವ ಪ್ರಸ್ತಾವವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರ ಹಿಂಪಡೆಯಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ನಿಂಗೇಗೌಡ ಎ.ಎಚ್, ಕರ್ನಾಟಕ ಸಾಮಾನ್ಯ ಸೇವೆಗಳು(ಪದವಿಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2026ರ ಕರಡು ಅಧಿಸೂಚನೆಯ ಮೂಲಕ ಸರ್ಕಾರಿ ಹಾಗೂ ಅನುದಾನಿತ ಪಿಯು ಉಪನ್ಯಾಸಕರ ಸೇವಾ ವ್ಯಾಪ್ತಿಯನ್ನು 9ನೇ ಹಾಗೂ 10ನೇ ತರಗತಿಗಳ ಭೋದನೆಗೂ ವಿಸ್ತರಿಸಲು ಉದ್ದೇಶಿಸಿರುವ ಪ್ರಸ್ತಾವವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಹಿಂದಿನಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ಮರಳಿ ವರ್ಗಾಯಿಸಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ವಿದ್ಯಾರ್ಥಿ-ಉಪನ್ಯಾಸಕರ ಅನುಪಾತವನ್ನು ತಕ್ಷಣ ಪರಿಷ್ಕರಿಸಿ ಎನ್‌ಸಿಇಆರ್‌ಟಿ ಮಾರ್ಗಸೂಚಿಯನ್ವಯ ಪ್ರಾಯೋಗಿಕವಲ್ಲದ ವಿಷಯಗಳಿಗೆ 160:1 ಹಾಗೂ ಪ್ರಾಯೋಗಿಕ ವಿಷಯಗಳಿಗೆ 80:1 ಅನುಪಾತವನ್ನು ನಿಗದಿಪಡಿಸಿ, ಅದರಂತೆ ಅಗತ್ಯ ಉಪನ್ಯಾಸಕರ ಹುದ್ದೆಗಳನ್ನು ಮಂಜೂರು ಮಾಡಿ ಭರ್ತಿ ಮಾಡಬೇಕು ಎಂದರು.
ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಹಾಗೂ ಪದೋನ್ನತಿ ಹೊಂದಿದ ಪ್ರಾಂಶುಪಾಲರ ಸ್ಥಳನಿಯುಕ್ತಿಯ ಸಂದರ್ಭದಲ್ಲಿ ಎಲ್ಲ ಖಾಲಿ ಹುದ್ದೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಬೇಕು. ಪ್ರೌಢಶಾಲಾ ಶಿಕ್ಷಕರಾಗಿ ನೇಮಕಗೊಂಡು, ಹೆಚ್ಚಿನ ವಿದ್ಯಾರ್ಹತೆ ಆಧಾರದ ಮೇಲೆ ಪಿಯು ಕಾಲೇಜುಗಳ ಉಪನ್ಯಾಸಕರಾಗಿ ಭಡ್ತಿ ಹೊಂದಿರುವ ಉಪನ್ಯಾಸಕರ 10, 15, 20 ಹಾಗೂ 25 ವರ್ಷಗಳ ಕಾಲಮಿತಿ ವೇತನ ಭಡ್ತಿ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು ಎಂದು ನಿಂಗೇಗೌಡ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು, ಪಿಯು ಉಪನ್ಯಾಸಕರು ಭಾಗವಹಿಸಿದ್ದರು.















