ಬೆಂಗಳೂರು: ಭಾನುವಾರ ಸಿಎಂ ಡಿ. ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರುಗಳು ಹುನಗುಂದ್ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ಅವರಿಗೆ ನೂತನ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಇಲಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ ತಿಳಿಸಿದರು.
ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭಾನುವಾರ ರಾತ್ರಿ ಇಲಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸದಸ್ಯರು ಮತ್ತು ಕಾರ್ಯಕರ್ತರು ಹಾಗೂ ವಿಜಯಾನಂದ್ ಎಸ್.ಕಾಶಪ್ಪನವರ್ ಅಭಿಮಾನಿಗಳು ಭೇಟಿ ನೀಡಿದರು. ಈ ವೇಳೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಿಗೆ ಕಾಶಪ್ಪನವರ್ ಅವರನ್ನು ಮಂತ್ರಿಯಾಗಿ ನಿಯೋಜಿಸುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಇಳಕಲ್ ಹಾಗೂ ಹುನಗುಂದದಿಂದ ಸಾವಿರಾರು ಕಾರ್ಯಕರ್ತರು ಈ ವೇಳೆ ನಿವಾಸದ ಹೊರಗೆ ನೆರೆದು ತಮ್ಮ ನೆಚ್ಚಿನ ನಾಯಕನಿಗೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ರಜಾಕ್ ತಟಗಾರರವರು ಮಾದ್ಯಮಗಳ ಜೊತೆ ಮಾತನಾಡಿ, ವಿಜಯಾನಂದ್ ಎಸ್.ಕಾಶಪ್ಪನವರ್ ಅವರ ಕುಟುಂಬ ಕಳೆದ 50 ವರ್ಷಗಳಿಂದ ಮನೆತನ ನಿಷ್ಠೆಯಿಂದ ಇದೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕುಟುಂಬ ಎಂಬ ಕೀರ್ತಿ, ಹೆಗ್ಗಳಿಕೆ ಪಡೆದಿದೆ. ಯುವ ನಾಯಕ, ಕ್ರಿಯಾಶೀಲರಾಗಿರುವ ಮತ್ತು ಕಾಂಗ್ರೆಸ್ ಪಕ್ಷ ಉತ್ತಮ ಸಂಘಟಕರಾಗಿರುವ ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಕೃಷ್ಣ ನದೀ ನೀರು ಯೋಜನೆ ಜಾರಿಗೆ ತಂದಿದ್ದು , 60 ಸಾವಿರ ಎಕರೆ ಇಸ್ರೇಲ್ ಮಾದರಿ ನೀರಾವರಿ ಯೋಜನೆ, ಶಿಕ್ಷಣಕ್ಕೆ ಒತ್ತು ಮತ್ತು ಸ್ಮಾರ್ಟ್ ಕ್ಲಾಸ್ ಬೋರ್ಡ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಅವರಿಂದ ಆಗಿದೆ. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿದ್ದಾರೆ. ಹುನಗಂದ್-ಇಲಕಲ್ ಅವಳಿ ನಗರದಲ್ಲಿ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣ, ಸಮುದಾಯ ಭವನ ಹಾಗೂ ರಸ್ತೆಗಳ ಅಭಿವೃದ್ಧಿ, ಮರೋಳ್ ನಲ್ಲಿ ಏತಾ ನೀರಾವರಿ, ನಂದವಡಗಿ ಏತ ನೀರಾವರಿ, ಹನಿ ನೀರಾವರಿಗೆ ಒತ್ತು ನೀಡಿ ರೈತರ ಬಾಳಿಗೆ ಬೆಳಕಾಗಿದ್ದಾರೆ ಎಂದರು.
ತಾಲೂಕುನಲ್ಲಿ ಕ್ರೀಡೆಗಳಿಗೆ ಒತ್ತು ನೀಡಿ ಒಳಾಂಗಣ, ಹೊರಂಗಣ ಮತ್ತು ಈಜುಕೊಳ ನಿರ್ಮಾಣ ಮಾಡಿದ್ದಾರೆ. 2339 ನಿವೇಶನಗಳ ಹಕ್ಕು ಪತ್ರವನ್ನು ವಸತಿ ರಹಿತರಿಗೆ ನೀಡಿದ್ದಾರೆ. ಇನ್ನು ನಮ್ಮ ಕ್ಷೇತ್ರದಲ್ಲಿ 60 ಕ್ಕೂ ಹೆಚ್ಚು ಜಾತಿ ಸಮುದಾಯದವರು ಇದ್ದು, ಎಲ್ಲರನ್ನ ಸಹೋದರತ್ವದಲ್ಲಿ ಬಾಳುತ್ತಿದ್ದೇವೆ ಎಂದರೆ ಅವರೆ ಕಾರಣ. ಶಾಸಕರಾಗಿ ವಿಜಯಾನಂದ್ ಎಸ್.ಕಾಶಪ್ಪನವರ್ ಅವರು ಯುವ ಕಾಂಗ್ರೆಸ್ , ಜಿಲ್ಲಾ ಕಾಂಗ್ರೆಸ್, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಯಲ್ಲಿ ಉತ್ತಮ ಸಂಘಟಕರಾಗಿ ಶ್ರಮಿಸಿರುವುದನ್ನು ಸಚಿವ ಸಂಪುಟದ ವಿಸ್ತರಣೆಯ ವೇಳೆ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ, ಶಾಸಕರ ಧರ್ಮಪತ್ನಿ ವೀಣಾ ಕಾಶಪ್ಪನವರ್ ಮಾತನಾಡಿ, ವಿಜಯಾನಂದ್ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲು ನೂರಾರು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಾಜಧಾನಿಗೆ ಬಂದಿರುವುದನ್ನು ನೋಡಿ ಸಂತಸವಾಗಿದೆ. ನಮ್ಮ ಕುಟುಂಬ ತಲೆ ತಲೆಮಾರುಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಜನಸೇವೆಯನ್ನು ಮಾಡಿಕೊಂಡು ಬಂದಿರುವುದು ಈ ಅಭಿಮಾನಕ್ಕೆ ಕಾರಣ. ಅವರುಗಳ ಆಶಯದಂತೆ ಹುನಗುಂದ್ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.














