ಬೆಂಗಳೂರು: ಆದಿವಾಸಿ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ಸ್ಥಾಪಿಸಿರುವುದು ಸ್ವಾಗತಾರ್ಹವಾಗಿದ್ದು, ಅಧ್ಯಕ್ಷರಾಗಿ ವಿಚಾರವಂತರು, ಸಂಶೋಧಕರಾದ ಪ್ರೊ ಕೆ ಮೇತ್ರಿ ಅವರನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯಾಧ್ಯಕ್ಷ ಎಂ ಕೃಷ್ಣಯ್ಯ ಒತ್ತಾಯಿಸಿದರು.
ಶಾಸಕರ ಭವನದ ಸಂಭಾಂಗಣದಲ್ಲಿ ಕರ್ನಾಟಕದ ಆದಿವಾಸಿ ರಕ್ಷಣಾ ಪರಿಷತ್ತಿನ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಧ್ಯಯನಕಾರರು, ಸಂಶೋಧಕರು ಹಾಗೂ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಕೆ ಮೇತ್ರಿ ಅವರನ್ನು ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿದರೆ ಆದಿವಾಸಿಗಳಿಗೆ ಸೂಕ್ತ ನ್ಯಾಯ ಸಿಕ್ಕಿದಂತಾಗುತ್ತದೆ. ಜ್ಞಾನವಿಲ್ಲದ, ತಿಳುವಳಿಕೆ ಇಲ್ಲದ ಯಾರೋ ಒಬ್ಬ ವ್ಯಕ್ತಿಯನ್ನು ನೇಮಿಸುವುದರಿಂದ ಅತ್ಯಂತ ಹಿಂದುಳಿದ ಸಮುದಾಯಗಳಾದ ನಮಗೆ ಯಾವುದೇ ಉಪಯೋಗ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರೊ ಕೆ ಮೇತ್ರಿ ಅವರು ಪ್ರಾಜ್ಞರು, ವಿದ್ಯಾವಂತರು, ಸುಶಿಕ್ಷಿತರಾದ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಹಂಪಿ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ಸಂಸ್ಥೆಗೆ ಅವರ ಕೊಡುಗೆ ಅಪಾರವಾಗಿದೆ. ಸಂಸ್ಥೆಯ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ಬಳಿಕವೂ ಬುಡಕಟ್ಟುಗಳ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಆದಿವಾಸಿ ಸಮುದಾಯಗಳ ಕುರಿತು ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಆದ್ದರಿಂದ ನಮ್ಮ ಸಮುದಾಯದವರೇ ಆದ ಅವರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸ್ಥಾನಮಾನ ನೀಡುವುದರಿಂದ ಯೋಜನೆಗಳು ಸರಿಯಾದ ವ್ಯಕ್ತಿಗಳಿಗೆ ತಲುಪಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದಿವಾಸಿಗಳಿಗೆ ಒಳ ಮೀಸಲಾತಿ ನೀಡಿ:
ಒಟ್ಟಾರೆಯಾಗಿ ರಾಜ್ಯದಲ್ಲಿ ಸುಮಾರು 50 ಬುಡಕಟ್ಟು ಸಮುದಾಯಗಳಿದ್ದು, ಅವುಗಳ ಸೂಕ್ತ ಮರು ಸಮೀಕ್ಷೆಯನ್ನು ಕೈಗೊಳ್ಳಬೇಕು. ದತ್ತಾಂಶವನ್ನು ವೈಜ್ಞಾನಿಕವಾಗಿ ಕ್ರೂಡೀಕರಿಸಿ ಒಳ ಮೀಸಲಾತಿಯನ್ನು ಜಾರಿಗೆ ತರಬೇಕು. ಸುಪ್ರೀಂ ಕೋರ್ಟ್ ತನ್ನ ಯಾವುದೇ ಆದೇಶದಲ್ಲಿ ಆದಿವಾಸಿಗಳಿಗೆ ಒಳ ಮೀಸಲಾತಿಯನ್ನು ಕೊಡಬಾರದು ಎಂದು ಹೇಳಿಲ್ಲ. ಆದ್ದರಿಂದ ಅನುಸೂಚಿತ ಜಾತಿಗಳ ಮಾದರಿಯಲ್ಲಿ ನಮಗೂ ಒಳ ಮೀಸಲಾತಿಯನ್ನು ಕೊಡಬೇಕು ಎನ್ನುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಆಗಸ್ಟ್ 9ರಂದು ಬೃಹತ್ ಸಮಾವೇಶ:
ಇದೇ ವರ್ಷದ ಆಗಸ್ಟ್ 9ರಂದು ಆದಿವಾಸಿ/ಬುಡಕಟ್ಟು ಸಮುದಾಯಗಳ ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ವಿಶ್ವ ಆದಿವಾಸಿ ದಿನಾಚರಣೆಯನ್ನು ಸಹ ಆಚರಿಸಲಿದ್ದೇವೆ. ಆದಿವಾಸಿಗಳ ಹಕ್ಕುಗಳ ಕುರಿತು ಸಮಾವೇಶದಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ. ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಅಲ್ಲಿ ಬುಡಕಟ್ಟು ಸಮಾಜಗಳ ಎಲ್ಲಾ ಸಂಘಟನೆಗಳ ಸಮಾಧಮವಾಗಲಿದೆ ಎಂದು ಎಂ ಕೃಷ್ಣಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜೇಶ್, ಜಂಟಿ ಕಾರ್ಯದರ್ಶಿಗಳಾದ ಜಿ ಸ್ವಾಮಿ, ವಾಸುದೇವ್ ಕಾಳೆ, ಉಪಾಧ್ಯಕ್ಷೆ ಕುಮುದಾ, ಜಿಲ್ಲಾಧ್ಯಕ್ಷ ಸುರೇಶ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.















