ಬೆಂಗಳೂರು: ಯುವಶಕ್ತಿ ಅಣುಶಕ್ತಿಗಿಂತಲೂ ಮಿಗಿಲಾಗಿದ್ದು, ಅವರು ಮನಸ್ಸು ಮಾಡಿದರೆ ನವ ಸಮಾಜದ ನಿರ್ಮಾಣ ಮಾಡಬಹುದು. ಹೀಗಾಗಿ ಯುವಜನರನ್ನು ದುಶ್ಚಟ, ದುರ್ಗುಣಗಳಿಂದ ಮುಕ್ತಗೊಳಿಸಿ, ಆ ಅದ್ಭುತ ಶಕ್ತಿಯನ್ನು ಸುಂದರ ಸಮಾಜದ ನಿರ್ಮಾಣಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಕರೆ ನೀಡಿದರು
ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಿಳಾ ಘಟಕ ಮತ್ತು ಯುವ ಘಟಕದ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಯುವಜನರು ರೀಲ್ಸ್ ಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಮದ್ಯ, ಧೂಮಪಾನ, ಮಾದಕದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ಇವರನ್ನು ಸರಿದಾರಿಗೆ ತರುವ ಕಾರ್ಯವನ್ನು ಯುವಘಟಕ ಮತ್ತು ಮಹಿಳಾ ಘಟಕ ಮಾಡಬೇಕು ಎಂದರು.
ಯುವ ಘಟಕ ಮತ್ತು ಮಹಿಳಾ ಘಟಕಗಳ ಪದಾಧಿಕಾರಿಗಳು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರಾಜ್ಯದ ಮೂಲೆ ಮೂಲೆಯಲ್ಲಿರುವ ಸಮುದಾಯದ ಯುವಜನರನ್ನು ಸಂಪರ್ಕಿಸಿ, ಅವರನ್ನು ಸದಸ್ಯರನ್ನಾಗಿ ಮಾಡುವುದರ ಜೊತೆಗೆ, ಅವರ ಕೌಶಲ್ಯವರ್ಧನೆಗೆ ನೆರವಾಗಬೇಕು. ನಮ್ಮ ಸಮಾಜದ ಹಿರಿಮೆ ಹೇಳಿಕೊಂಡು ಓಡಾಡಿದರೆ ಪ್ರಯೋಜನವಾಗುವುದಿಲ್ಲ. ವರ್ತಮಾನದಲ್ಲಿ ನಾವು ಎಲ್ಲಿ ನಿಂತಿದ್ದೇವೆ ಎಂದು ಪರಾಮರ್ಶೆ ಮಾಡಿಕೊಳ್ಳಬೇಕು. ಪರಿಶ್ರಮದಿಂದ ಮೇಲೆ ಬರಬೇಕು ಎಂದು ಕರೆ ನೀಡಿದರು.
ಅನುಭವ ಮಂಟಪದಲ್ಲಿ ಇಷ್ಟಲಿಂಗ ಪೂಜೆ:
ಇಷ್ಟಲಿಂಗ ಪೂಜೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ. ಹೀಗಾಗಿ ಬಸವಕಲ್ಯಾಣದಲ್ಲಿ 770 ಅಮರಗಣಂಗಳ ಆಧಾರಸ್ತಂಭದ ಮೇಲೆ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪದಲ್ಲಿ ವೈಜ್ಞಾನಿಕ ತಳಹದಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಕಲ್ಪನೆಯನ್ನೂ ಅಳವಡಿಸಲಾಗಿದೆ. ಅಲ್ಲಿ ಶರಣ ಗ್ರಾಮ ನಿರ್ಮಾಣ ಮಾಡುತ್ತಿದ್ದು, ಶರಣರು ಮಾಡುತ್ತಿದ್ದ ಕಾಯಕಕ್ಕೆ ಆಧುನಿಕ ಸ್ಪರ್ಶ ನೀಡಿ, ಆಧುನಿಕ ಸಲಕರಣೆ ಬಳಸಿ ಆ ವೃತ್ತಿ ಮಾಡುವುದು ಹೇಗೆ ಎಂಬ ಕಾರ್ಯಾಗಾರ ನಡೆಸಲು ಸಿದ್ಧತೆ ನಡೆದಿದೆ. ಮುಂದಿನ ಬಸವಜಯಂತಿ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ, ಆಧುನಿಕ ಅನುಭವ ಮಂಟಪ ಲೋಕಾರ್ಪಣೆ ಮಾಡಲಾಗುವುದು ಎಂದರು.
ಸಂಘಟನೆಯಲ್ಲಿ ಹಿಂದೆ ಬೀಳಬಾರದು:
ನಮ್ಮ ಸಮುದಾಯದಲ್ಲಿ ಹಲವರು ಆರ್ಥಿಕವಾಗಿ ಬಲಿಷ್ಠರಾಗಿದ್ದಾರೆ. ಆದರೆ ನಾವು ಸಂಘಟನೆಯಲ್ಲಿ ಹಿಂದೆ ಬೀಳಬಾರದು. ಗಳಿಕೆಯಲ್ಲಿ ಸ್ಪಲ್ಪ ಪ್ರಮಾಣದ ಹಣವನ್ನು ಸಮಾಜಕ್ಕಾಗಿ ವಿನಿಯೋಗಿಸಿದರೆ ಉತ್ತಮ ಕೆಲಸ ಮಾಡಲು ಸಹಕಾರಿ ಆಗುತ್ತದೆ. ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಶಿವಯೋಗಮಂದಿರ ಎರಡೂ ಹಾನಗಲ್ಲ ಕುಮಾರೇಶ್ವರರು ನಮಗೆ ನೀಡಿದ ಎರಡು ಅಮೂಲ್ಯ ಕೊಡುಗೆಯಾಗಿದೆ. ಮಹಾಸಭಾ ಸಮಾಜದ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿ, ಮಾತೃ ಸಂಸ್ಥೆಯಾಗಿ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು.
ಮಹಿಳಾ ಘಟಕ ಸಂಸ್ಕಾರದ ಬುನಾದಿಯಾಗಬೇಕು:
ಶರಣರ ಕ್ರಾಂತಿಯ ಕಾಲದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿತ್ತು. ಅಕ್ಕಮಹಾದೇವಿ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ನೀಲಾಂಬಿಕೆಯೇ ಮೊದಲಾದ 33 ಶರಣೆಯರು ಅನುಭವ ಮಂಟಪದಲ್ಲಿ ಸಮಾನವಾಗಿ ಚರ್ಚಿಸುತ್ತಿದ್ದರು. ಇಂದು ನಮ್ಮ ಮಹಾಸಭಾದ ಮಹಿಳಾ ಘಟಕವು ಕೇವಲ ಒಂದು ಸಂಘಟನೆಯಲ್ಲ; ಅದು ನಮ್ಮ ಸಮಾಜದ ಸಂಸ್ಕಾರದ ತಳಹದಿ ಆಗಬೇಕು ಎಂದರು.
ಮಹಿಳೆಯರ ಬಗ್ಗೆ ಸಮಾಜದ ಮನಃಸ್ಥಿತಿ ಬದಲಾಗಬೇಕು:
ಸರ್ಕಾರಗಳು ನಾರಿಯರ ರಕ್ಷಣೆಗೆ ಹಲವು ಕಾಯ್ದೆಗಳನ್ನು ತಂದಿವೆ. ಆದರೆ, ಮಹಿಳೆಯರ ಬಗ್ಗೆ ಸಮಾಜದ ಮನಃಸ್ಥಿತಿ ಬದಲಾಗಬೇಕು. ಮಹಿಳೆಯರು ಸಂಘಟಿತರಾದರೆ ಉತ್ತಮ ಕಾರ್ಯ ಮಾಡಬಹುದು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಉದ್ದಿಮೆದಾರರಾಗಿದ್ದಾರೆ, ಸಣ್ಣ ಉದ್ಯಮ ನಡೆಸುತ್ತಿದ್ದಾರೆ. ಸ್ವಸಹಾಯ ಗುಂಪುಗಳ ಮೂಲಕ ಸಾಧನೆ ಮಾಡುತ್ತಿದ್ದಾರೆ. ಇಂತಹ ಸಾಧಕ ಮಹಿಳೆಯರು ನಮ್ಮ ಸಮಾಜದ ಇತರ ಮಹಿಳೆಯರಿಗೆ, ಕೌಶಲ್ಯ ಕಲಿಸಬೇಕು. ಅವರನ್ನೂ ತಮ್ಮೊಂದಿಗೆ ಸೇರಿಸಿಕೊಂಡು ಅವರ ಆರ್ಥಿಕ ಪ್ರಗತಿಗೆ ಶ್ರಮಿಸಬೇಕು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ನಾವು ಪರಸ್ಪರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಭೀಮಣ್ಣ ಖಂಡ್ರೆ ಪಕ್ಷಾತೀತವಾಗಿ ಸಮಾಜವನ್ನು ಒಗ್ಗೂಡಿಸಿದರು:
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಲಿಂಗೈಕ್ಯ ಭೀಮಣ್ಣ ಖಂಡ್ರೆ ಅಧ್ಯಕ್ಷರಾಗಿದ್ದಾಗ ವಿಧಾನಸಭೆ ಚುನಾವಣೆ ಹತ್ತಿರದಲ್ಲಿತ್ತು. ಆಗ ಅವರು ಬೀದರ್, ಕಲ್ಬುರ್ಗಿ, ಧಾರವಾಡ, ಗದಗ, ಬೆಳಗಾವಿ, ತುಮಕೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸಿ ಪಕ್ಷಾತೀತವಾಗಿ ಸಮಾಜ ಒಗ್ಗೂಡಿಸಿದರು. ಆಗ ನಡೆದ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಶಾಸಕರು ದೊಡ್ಡ ಸಂಖ್ಯೆಯಲ್ಲಿ ಗೆದ್ದು ಬಂದಿದ್ದರು. ವೀರಶೈವ-ಲಿಂಗಾಯತರನ್ನು ಒಡೆಯುವ ಪ್ರಯತ್ನ ನಡೆದಾಗ ಶಾಮೂರು ಶಿವಶಂಕರಪ್ಪ ಸಮಾಜದ ಪರ ನಿಂತರು, ಮಹಾಸಭಾದ ಅಧ್ಯಕ್ಷರಾದಿ ತಮ್ಮ ಜವಾಬ್ದಾರಿ ನಿಭಾಯಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪೂರ, ಶಾಸಕರುಗಳಾದ ವಿಜಯಾನಂದ ಕಾಶೆಪ್ಪನವರ್, ಮಾಜಿ ಸಚಿವೆ ರಾಣಿ ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶೆಪ್ಪನವರ್, ಯುವ ಘಟಕದ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.















