ಬೆಂಗಳೂರು: ಕರ್ನಾಟಕ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳ ಭೂ-ಪರಭಾರೆ ನಿಷೇಧ ಕಾಯ್ದೆ 1978-79 ಪಿಟಿಸಿಎಲ್ ಕಾಯ್ದೆ ಉಲ್ಲಂಘನೆ ಮಾಡುತ್ತಿರುವ ಭ್ರಷ್ಟ ಜಿಲ್ಲಾಧಿಕಾರಿ, ಉಪ ವಿಭಾಗಧಿಕಾರಿಗಳ, ಜಿಲ್ಲಾಧಿಕಾರಿಗಳ ವಿರುದ್ದ ಪಿಟಿಸಿಎಲ್ ಹೋರಾಟ ಸಮಿತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಸಾವಿರಾರು ಎಸ್.ಸಿ.ಎಸ್.ಟಿ ಪ್ರತಿಭಟನಾಕಾರರು ಭಾಗವಹಿಸ ಕಂದಾಯ ಸಚಿವರು ಸ್ಥಳಕ್ಕೆ ಬರುವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಪ್ರಜಾ ವಿಮೋಚನಾ ಸಮಿತಿಯ ಮುನಿಅಂಜನಪ್ಪ, ದಲಿತ ಸಂಘರ್ಷ ಸಮಿತಿಯ ಮುನಿಯಪ್ಪ, ಭೀಮಪುತ್ರಿ ರೇವತಿರಾಜ್, ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತ ಹೋರಾಟ ಸಮಿತಿಯ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಮಂಜುನಾಥ್ ಮಾತನಾಡಿ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಸಂವಿಧಾನದ ಆಶಯಗಳ ವಿರುದ್ಧ ತೀರ್ಪು ನೀಡುತ್ತಿರುವ ದಲಿತರ ವಿರೋಧಿ ವ್ಯವಸ್ಥೆ ಖಂಡನೀಯ, ಭ್ರಷ್ಟ ತಹಸೀಲ್ದಾರ್, ಸಬ್ ರಿಜಿಸ್ಟ್ರಾರ್, ಕೇಸ್ ವರ್ಕರ್, ಆರ್ ಐ, ವಿಎ ಸೇರಿಕೊಂಡು ಕಂದಾಯ ಇಲಾಖೆಯನ್ನು ದ್ವಂಸ ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸ್ವಾತಂತ್ರ್ಯ ಪೂರ್ವದಿಂದಲೂ ಶೋಷಿತ ಸಮುದಾಯಗಳು ನೋವನ್ನು ಅನುಭವಿಸಿದ್ದು, ಡಾ ಬಿ.ಆರ್ ಅಂಬೇಡ್ಕರ್ ಹಾಕಿಕೊಟ್ಟ ಹೋರಾಟದ ಹಾದಿಯಲ್ಲಿ ಪ್ರೊ. ಬಿ ಕೃಷ್ಣಪ್ಪ ನವರು ಕರ್ನಾಟನ ದಲಿತ ಸಂಘರ್ಷ ಸಮಿತಿ ರಚಿಸಿ ದಲಿತರಿಗೆ ಭೂಮಿ ವಾಪಸ್ಸು ಕೊಡಿಸಲು ಮುಂದಾದರು. ಸುಮಾರು ಒಂದು ವರ್ಷಗಳ ಕಾಲ ನಿರಂತರವಾಗಿ ಮಾಡಿದ ಭೂ ಹೋರಾಟದ ಪರಿಣಾಮವಾಗಿ ಅಂದಿನ ಮುಖ್ಯಮಾತ್ರಿಗಳಾಗಿದ್ದ ದೇವರಾಜ್ ಅರಸು ಅವರು ಅಂದಿನ ಕಂದಾಯ ಸಚಿವ ಬಿ ಬಸವಲಿಂಗಪ್ಪ ಅವರ ಬಳಿ ಚರ್ಚಿಸಿ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆ 1978-79 ಅನ್ನು ಜಾರಿಗೆ ತಂದರು. ಇದರ ಪರಿಣಾಮವಾಗಿ ಲಕ್ಷಾಂತರ ಜನರು ಸರ್ಕಾರದಿಂದ ಪಡೆದಿದ್ದ ಭೂಮಿಗೆ ರಕ್ಷಣೆ ಒದಗಿತು ಎಂದು ತಿಳಿಸಿದರು.
ಆದರೆ ಇಂದು ಎಸ್.ಸಿ/ಎಸ್.ಟಿ ಜಮೀನುಗಳನ್ನು ಭೂಗಳ್ಳರು ಕಾನೂನು ಬಾಹಿರವಾಗಿ ಲಪಟಾಯಿಸುತ್ತಿದ್ದಾರೆ. ಸರ್ಕಾರವು ಬೇಜವಾಬ್ದಾರಿ ತೋರುತ್ತಿದ್ದಾರೆಂ ಆದರೆ ಬಾಬಾ ಸಾಹೇಬರಿಂದ ಮೀಸಲಾತಿ ಪಡೆದು ಎಂ.ಎಲ್.ಎ, ಎಂ.ಎಲ್.ಸಿ, ಎಂ. ಪಿ, ಮಂತ್ರಿಗಳಾಗಿ ಆಯ್ಕೆಯಾಗಿರುವವರು ಪಿ.ಟಿ.ಸಿ.ಎಲ್ ಕಾಯ್ದೆಯ ಪರವಾಗಿ ಧ್ವನಿ ಎತ್ತದೆ ಸಂವಿಧಾನಕ್ಕೆ ಹಾಗೂ ಸಮುದಾಯಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಮಂಜುನಾಥ್ ಕಿಡಿಕಾರಿದರು.














