ಬೆಂಗಳೂರು: ಕಾರ್ಮಿಕನ ಬೆವರು ಬಂಗಾರಕ್ಕಿಂತ ಹೆಚ್ಚು. ಪ್ರತಿ ಬೆವರ ಹನಿಯ ಮೇಲೆ ಈ ದೇಶ ನಿಂತಿದೆ. ಆದರೆ ಆ ಕಾರ್ಮಿಕನ ಬದುಕು ಇವತ್ತಿಗೂ ಬೀದಿಯಲ್ಲಿದೆ. ಯಾಕೆಂದರೆ ಆಳುವವರಿಗೆ ಕಾರ್ಮಿಕರ ನೋವು ಅರ್ಥ ಆಗಿಲ್ಲ. ಇಂತಹ ಕಾರ್ಮಿಕ ವರ್ಗಕ್ಕೆ ಸರಕಾರ ನ್ಯಾಯಯುತವಾಗಿ ಸಲ್ಲಬೇಕಾದ ಸೌಲಭ್ಯಗಳನ್ನು ಕೊಡಬೇಕು ಎಂದು ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅಭಿಪ್ರಾಯಪಟ್ಟರು.
ಶುಕ್ರವಾರ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ 25 ಶ್ರಮಜೀವಿಗಳಿಗೆ ಹೆಚ್.ಡಿ.ಕುಮಾರಸ್ವಾಮಿ ಕಾರ್ಮಿಕ ರತ್ನ ಪ್ರಶಸ್ತಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕನ ಬೆವರು ದೇಶದ ಬೆಳವಣಿಗೆಯ ಬುನಾದಿತಾಗಿದೆ. ಆ ಶ್ರಮಕ್ಕೆ ಗೌರವ ಸಲ್ಲಿಸುವ ಸಲುವಾಗಿ ಜೆ.ಪಿ. ಭವನದಲ್ಲಿ ಬಹಳ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದರು.
ಕಾರ್ಮಿಕ ಅಂದರೆ, ಎಸಿ ರೂಮಲ್ಲಿ ಕುಳಿತು ಫೈಲ್‌ಗೆ ಸಹಿ ಹಾಕುವವನಲ್ಲ. ಬಿಸಿಲಲ್ಲಿ ನಿಂತು ಇಟ್ಟಿಗೆ ಹೊರುವವನು, ಮಳೆಯಲ್ಲಿ ನೆನೆದು ರಸ್ತೆ ಗುಡಿಸುವ ತಾಯಿ, ಹಗಲು-ರಾತ್ರಿ ಎನ್ನದೇ ಆಟೋ ಓಡಿಸುವ ಅಣ್ಣ, ಸೂಜಿ ದಾರ ಹಿಡಿದು ಗಾರ್ಮೆಂಟ್ಸ್‌ನಲ್ಲಿ ಬೆವರು ಸುರಿಸುವ ತಾಯಂದಿರು ಇವರೇ ನಿಜವಾದ ದೇಶದ ಮಾಲೀಕರು ಎಂದು ತಿಳಿಸಿದರು.
ಕಾರ್ಮಿಕನೇ ದೇಶದ ನಿಜವಾದ ನಿರ್ಮಾತೃ. ಕಟ್ಟಡ ಕಾರ್ಮಿಕ, ಗಾರ್ಮೆಂಟ್ಸ್ ನೌಕರ, ಆಟೋ ಚಾಲಕ, ಪೌರಕಾರ್ಮಿಕ, ಕೃಷಿ ಕೂಲಿ, ಅಸಂಘಟಿತ ವಲಯದ ದುಡಿಮೆಗಾರರು. ಇವರ ಶ್ರಮವಿಲ್ಲದೆ ಈ ಸಮಾಜವಿಲ್ಲ. ನಿಮ್ಮ ಬೆವರ ಹನಿ ಹನಿಯೂ ನಾಡಿನ ಪ್ರಗತಿಗೆ ಕೊಡುಗೆ ಎಂದರು.
25 ಶ್ರಮಜೀವಿಗಳಿಗೆ ಕಾರ್ಮಿಕ ರತ್ನ ಪ್ರಶಸ್ತಿ:
ಕಟ್ಟಡ ನಿರ್ಮಾಣ, ಗಾರ್ಮೆಂಟ್ಸ್, ಆಟೋ, ಟ್ಯಾಕ್ಸಿ, ಪೌರಕಾರ್ಮಿಕ, ಭದ್ರತಾ ಸಿಬ್ಬಂದಿ, ಮನೆ ಕೆಲಸ, ಹಮಾಲಿ ಸೇರಿದಂತೆ ವಿವಿಧ ಕಾರ್ಮಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿರುವ 25 ಜನ ಶ್ರಮಜೀವಿಗಳಿಗೆ ಹೆಚ್.ಡಿ. ಕುಮಾರಸ್ವಾಮಿ ಕಾರ್ಮಿಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ, ಗ್ರೇಟರ್ ಬೆಂಗಳೂರು ಕಾರ್ಮಿಕ ವಿಭಾಗದ ಅಧ್ಯಕ್ಷ ಎಂ. ಗೋಪಾಲ್, ಮಹಿಳಾ ಅಧ್ಯಕ್ಷೆ ಶೈಲಾ ಸಂತೋಜಿ ರಾವ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.














