ಬೆಳಗಾವಿ: ಖಾನಾಪುರ ತಾಲೂಕಿನ ಚೋರ್ಲಾ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಜನತೆ ಪ್ರತಿನಿತ್ಯ ಪರದಾಡುವಂತಾಗಿದೆ. ಸುಮಾರು ನಾಲ್ಕೈದು ವರ್ಷಗಳಿಂದ ಈ ರಸ್ತೆ ಇದೇ ಸ್ಥಿತಿಯಲ್ಲಿ ಇದ್ದರೂ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಗೆ ಒಳಪಡುವ ಈ ರಸ್ತೆ ಯಾಕೆ ರಿಪೇರಿ ಆಗುತ್ತಿಲ್ಲ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಸಂಬಂಧ ಪಟ್ಟ ಪಂಚಾಯತ್ ರಾಜ್ ಇಲಾಖೆಯ ಕಾರ್ಯಕಾರಿ ಅಭಿಯಂತರರು ಮಾತ್ರ ಕಚೇರಿಯಲ್ಲೇ ಕುಳಿತು ಕಾಲಹರಣ ಮಾಡುತ್ತಿದ್ದಾರೆ, ಹೊರತು ಹಳ್ಳಿಗಳ ಬಂದು ನೋಡುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿರಿಯ ಅಧಿಕಾರಿಗಳಿಗೆ ಸರ್ಕಾರ ಸುತ್ತಾಡಲು ಕಾರು, ಚಾಲಕ ಹೀಗೆ ಎಲ್ಲಾ ಸೌಕರ್ಯ ನೀಡಿದ್ದರೂ ಹಳ್ಳಿಗಳ ರಸ್ತೆ ಸುಧಾರಣೆ ಬಗ್ಗೆ ಇವರ ನಿರ್ಲಕ್ಷ್ಯ ಏಕೆ ಎಂಬುದು ತಿಳಿಯುತ್ತಿಲ್ಲ. ಅದೇ ರೀತಿ ಗುತ್ತಿಗೆದಾರರ ಜೊತೆ ಕಮಿಷನ್ ವ್ಯವಹಾರ ಜೋರಾಗಿ ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ವಿಷಯದಲ್ಲಿ ಸಂಬಂಧಿಸಿದ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಲೋಕಾಯುಕ್ತರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.














