ಜಾಂಬೋಟಿ: ಗಡಿಭಾಗದಲ್ಲಿರುವ ಜಾಂಬೋಟಿ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುವುದು ಅಷ್ಟಕ್ಕಷ್ಟೇ. ಈ ಮಧ್ಯೆ ಈಗ ವಿವಾದಿತ ಕಳಸಾ ಬಂಡೂರಿ ಯೋಜನೆಯ ನಂತರ ಸರ್ಕಾರ ಕುಸಮಳಿ ಹತ್ತಿರ ಮಲಪ್ರಭಾ ನದಿಗೆ ಡ್ಯಾಮ್ ಕಟ್ಟುವ ದುಸ್ಸಾಹಸಕ್ಕೆ ಕೈಹಾಕಿದ್ದು ಇದರಿಂದ ಮಲಪ್ರಭಾ ನದಿಯ ಅಸ್ಥಿತ್ವಕ್ಕೆ ದಕ್ಕೆ ಆಗುವ ಸಾಧ್ಯತೆ ಕಂಡು ಬರುತ್ತಿದೆ.
ಈ ಜಾಗದಲ್ಲಿ ಡ್ಯಾಮ್ ಕಟ್ಟಿ ಇಲ್ಲಿ ಸಂಗ್ರಹವಾಗುವ ನೀರನ್ನು ಬೆಳಗಾವಿ ತಾಲೂಕಿನ ಸಂತಿಬಸ್ತವಾಡ, ರಣಕುಂಡೆ ಸೇರಿದಂತೆ ಹತ್ತಿರದ ಗ್ರಾಮಗಳಿಗೆ ಪೂರೈಸುವ ಯೋಜನೆ ಇದಾಗಿದ್ದು, ಇದರಿಂದ ಜಾಂಬೋಟಿ ಭಾಗದಲ್ಲಿನ ಜನರಿಗೆ ಕುಡಿಯುವ ನೀರಿನ ಕೊರತೆ ಎದುರಾಗಬಹುದು ಎಂಬ ಆತಂಕ ಇಲ್ಲಿನ ಜನರಲ್ಲಿ ಮನೆ ಮಾಡಿದೆ. ಅಲ್ಲದೆ ಕೃಷಿ ಚಟುವಟಿಕೆಗಳಿಗೂ ನೀರಿನ ಕೊರತೆ ಎದುರಾಗಲಿದೆ. ಇಲ್ಲಿ ಮರಾಠಿ ಭಾಷಿಕರು ಹೆಚ್ಚಾಗಿರುವುದರಿಂದಲೇ ಇಲ್ಲಿನ ನೀರನ್ನು ಬೇರೆಡೆಗೆ ಸಾಗಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕುಸಮಳಿ ಬಳಿಯ ಜಾಂಬೋಟಿ ಪಶ್ಚಿಮ ಭಾಗದ ನೀರನ್ನು ಮುಂದಿನ ಪ್ರದೇಶಗಳಿಗೆ ಒಯ್ಯುವ ಈ ಯೋಜನೆಯಿಂದ ಇಲ್ಲಿನ ಸ್ಥಳೀಯರಿಗೆ ಆಗುವ ಲಾಭವಾದರೂ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇಷ್ಟು ದೊಡ್ಡ ಯೋಜನೆ ತಯಾರಾಗಿದ್ದರೂ ಇಲ್ಲಿನ ಮಾಜಿ ಶಾಸಕರು, ಈಗಿನ ಶಾಸಕರು, ಸ್ಥಳೀಯ ಮುಖಂಡರು ಮೌನವಾಗಿರುವುದೇಕೆ ಎಂದು ಜನ ಕೇಳುತ್ತಿದ್ದಾರೆ.
ಯೋಜನೆಗೆ 280 ಕೋಟಿ ಮಂಜೂರು:
ಕುಸಮಳಿ ಹತ್ತಿರ ಡ್ಯಾಮ್ ಕಟ್ಟಲು ನೀರಾವರಿ ಇಲಾಖೆ 280 ಕೋಟಿ ರೂಪಾಯಿ ಮಂಜೂರು ಮಾಡಿದೆ. ಇಲ್ಲಿ ಸಂಗ್ರಹವಾಗುವ ನೀರನ್ನು ಬೃಹತ್ ಪೈಪ್ ಗಳ ಮೂಲಕ ಬೆಳಗಾವಿಗೆ ಹರಿಸಲಾಗಲಿದೆ. ಆದರೆ ಇದರಿಂದ ಇಲ್ಲಿನ ಪರಿಸರಕ್ಕೆ, ಇಲ್ಲಿನ ಜನರಿಗೆ ಆಗುವ ಲಾಭವೇನು ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ.
ಜಾಗಕ್ಕೆ ಡಬಲ್ ರೇಟ್ ಕೊಟ್ಟಿತಾ ಸರ್ಕಾರ?
ಈ ಡ್ಯಾಮ್ ನಿರ್ಮಾಣದ ಜಾಗವನ್ನು ಸರ್ಕಾರ ರೈತರಿಂದ ಖರೀದಿಸಿದೆ ಎಂದು ತಿಳಿದು ಬಂದಿದೆ. ತಮ್ಮ ಜಮೀನನ್ನು ಮಾರಲ್ಲ ಎಂದರೂ ಸರ್ಕಾರ ರೈತರಿಗೆ ಡಬಲ್ ರೇಟ್ ಕೊಟ್ಟು ಈ ಜಾಗ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಯೋಜನೆಗೆ ಬೇಕಾದ 2 ಎಕರೆ ಯೋಜನೆಗೆ ಕೋಟಿಗಟ್ಟಲೆ ಹಣ ವ್ಯಯಿಸಲಾಗಿದೆ ಎನ್ನಲಾಗುತ್ತಿದೆ.
ಶಾಸಕರೇ ಇತ್ತ ನೋಡಿ:
ತಾಲೂಕಿಗೆ ಶಾಸಕರೇ ಮೊದಲ ಬಾಸ್ ಎಂಬುದು ಜನಸಾಮಾನ್ಯರ ಮಾತು. ತಾಲೂಕಿನಲ್ಲಿ ಯಾವುದೇ ಯೋಜನೆ ಜಾರಿಯಾದರೂ ಅದು ಶಾಸಕರ ಗಮನಕ್ಕೆ ಬರದೇ ಆಗುವುದಿಲ್ಲ. ಆದರೆ ಸ್ಥಳೀಯ ಶಾಸಕ ವಿಠ್ಠಲ ಹಲಗೇಕರ್ ಅವರ ಗಮನಕ್ಕೆ ಈ ವಿಚಾರ ಬಂದಿಲ್ಲವೇ? ಈ ಯೋಜನೆಯಿಂದ ಸ್ಥಳೀಯರಿಗೆ ಅನ್ಯಾಯವಾಗಲಿದೆ ಎಂಬುದು ಗೊತ್ತಾಗಲಿಲ್ಲವೇ? ಈಗಲಾದರೂ ಶಾಸಕರು ಜನರ ಹಿತದೃಷ್ಟಿಯಿಂದ ಈ ಬಗ್ಗೆ ಧ್ವನಿ ಎತ್ತಲಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಪ್ರತಿಕ್ರಿಯೆಗಳು:
ಜಾಂಬೋಟಿ ಜಿಪಂ ಮಾಜಿ ಸದಸ್ಯ ಜಯರಾಮ ದೇಸಾಯಿ ಯೋಜನೆಯ ಕುರಿತು ಮಾತನಾಡಿ, ಮರಾಠಿ ಭಾಷಿಕರು ಬಹುಸಂಖ್ಯಾತರಾಗಿರುವ ಈ ಜಾಂಬೋಟಿ ಪಶ್ಚಿಮ ಭಾಗದ ಪ್ರದೇಶದ ಮೇಲೆ ಕರ್ನಾಟಕ ಸರ್ಕಾರ ಸತತವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ. ಈಗ ಕುಸಮಳಿ ಹತ್ತಿರ ಡ್ಯಾಮ್ ಕಟ್ಟುವ ಯೋಜನೆಗೆ ಸ್ಥಳೀಯರು ಒಂದಾಗಿ ವಿರೋಧಿಸಬೇಕಿದೆ. ಈ ಯೋಜನೆಯಿಂದ ಸ್ಥಳಿಯರಿಗೆ ಆಗುವ ಲಾಭವಾದರೂ ಏನು ಎಂಬುದನ್ನು ಸರ್ಕಾರ ಹೇಳಬೇಕಿದೆ ಎಂದು ಕಿಡಿಕಾರಿದ್ದಾರೆ.
ಕುಸುಮಳಿಯ ಸಾಮಾಜಿಕ ಕಾರ್ಯಕರ್ತ, ಭಾಜಪ ಮುಖಂಡ ಅನಂತ ಸಾವಂತ ಪ್ರತಿಕ್ರಿಯಿಸಿ, ನಮ್ಮೂರಲ್ಲೇ ಈ ಯೋಜನೆಯ ಕೆಲಸ ನಡೆಯುತ್ತಿದ್ದರೂ ನಮಗೆ ಈ ಬಗ್ಗೆ ಗೊತ್ತೇ ಇಲ್ಲ. ನಾನು ಅಧ್ಯಕ್ಷನಾಗಿರುವ ಬೈಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಈ ಯೋಜನೆ ನಡೆಯುತ್ತಿದ್ದರೂ ನಮಗೆ ಈ ಬಗ್ಗೆ ಮಾಹಿತಿಯೇ ಬಂದಿಲ್ಲ. ಈ ಡ್ಯಾಮ್ ನಿಂದ ಸುತ್ತಮುತ್ತಲಿನ ರೈತರಿಗೆ ನೀರಿನ ಕೊರತೆಯಾದರೆ ಅದಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ.
ನೀರಾವರಿ ಇಲಾಖೆಯ ಇಂಜಿನಿಯರ್, ಕೇದಾರಜಿ ಯೋಜನೆಯ ಕುರಿತು ಮಾತನಾಡಿ, ರಣಕುಂಡೆ, ಸಂತಿಬಸ್ತವಾಡ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಕೊಡಲು ನಾವು ಈ ಯೋಜನೆ ಮಾಡುತ್ತಿದ್ದೇವೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ವಿಧಾನಸಭಾ ಕ್ಷೇತ್ರದ ಪ್ರದೇಶಗಳಿಗೆ ನೀರು ತಲುಪಿಸಲು ಅವರ ಸಲಹೆಯ ಮೇರೆಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲದಲ್ಲಿ ನಾವು ಇಲ್ಲಿನ ನೀರನ್ನು ಆ ಪ್ರದೇಶಗಳಿಗೆ ಸಾಗಿಸಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.















