ಫ್ರೀಡಂಪಾರ್ಕ್‌ನಲ್ಲಿ ದಲಿತ ಜನಾಗ್ರಹ ಸಮಾವೇಶ; ಡಿ.ಸಿ.ಎಂ ಮನವಿ ಸ್ವೀಕಾರ

WhatsApp
Telegram
Facebook
Twitter
LinkedIn

ಬೆಂಗಳೂರು: ಭೂಮಿ, ವಸತಿ, ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಉದ್ಯೋಗ ಮೀಸಲಾತಿ, ವಿಶೇಷ ಘಟಕ ಯೋಜನೆ ಹಾಗೂ ಏಕಗವಾಕ್ಷಿ ನೀತಿ ಜಾರಿಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ದಲಿತ ಜನಾಗ್ರಹ ಸಮಾವೇಶ ನಡೆಯಿತು.

ಈ ವೇಳೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಪ್ರತಿಭಟನಾಕಾರರು ಸಲ್ಲಿಸಿದ 19 ಬೇಡಿಕೆಗಳ ಕುರಿತು ಮುಂದಿನ ವಾರ ವಿಧಾನಸೌಧದಲ್ಲಿ ಸಂಘಟನೆಯ ಪದಾಧಿಕಾರಿಗಳು, ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗುವುದು. ಸಾಧ್ಯವಾದರೆ ಮುಖ್ಯಮಂತ್ರಿಯವರನ್ನೂ ಸಭೆಗೆ ಆಹ್ವಾನಿಸುವುದಾಗಿ ತಿಳಿಸಿದರು.

ದಲಿತ ಸಮುದಾಯದ ಭೂಮಿ, ಶಿಕ್ಷಣ, ವಸತಿ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವು ಇದೆ. ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಶಿಕ್ಷಣ ಸಮಾಜ ಪರಿವರ್ತನೆಯ ಪ್ರಮುಖ ಸಾಧನವಾಗಿದ್ದು, ದಲಿತ ಸಮುದಾಯದ ಮುಂದಿನ ಪೀಳಿಗೆ ಯಾವುದೇ ರೀತಿಯ ಅನ್ಯಾಯ ಅಥವಾ ನೋವಿಗೆ ಒಳಗಾಗದಂತೆ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

ಇಂದು ಬೇಡಿಕೆಗಳ ಕುರಿತು ಯಾವುದೇ ನಿರ್ದಿಷ್ಟ ಘೋಷಣೆ ಮಾಡುವುದಿಲ್ಲ. ಆದರೆ ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ ವಾದದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್‌ ಮಾತನಾಡಿ, ಖಾಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿಶೇಷ ಘಟಕ ಯೋಜನೆ ಹಣವನ್ನು ನಿಯಮಬಾಹಿರವಾಗಿ ಸಾರಿಗೆ ಇಲಾಖೆ ಸಿಬ್ಬಂದಿಗಳ ವೇತನಕ್ಕೆ ಬಿಡುಗಡೆ ಮಾಡಲಾಗಿದ್ದು, 200 ಕೋಟಿ ರುಪಾಯಿಯನ್ನು ಮರು ವಸೂಲಿ ಮಾಡಬೇಕು. ಹಣ ಬಿಡುಗಡೆಗೊಳಿಸಿದ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಶೇಷ ಘಟಕ ಯೋಜನೆ ಅನುಷ್ಠಾನಕ್ಕೆ ಏಕಗವಾಕ್ಷಿ ನೀತಿ ಜಾರಿಯಾಗಬೇಕು. ಪರಿಶಿಷ್ಟರ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಭೂಹೀನ ಪರಿಶಿಷ್ಟ ಕೃಷಿ ಕಾರ್ಮಿಕರಿಗೆ ಕನಿಷ್ಟ ಎರಡು ಎಕರೆ ಜಮೀನು ನೀಡಬೇಕು. ಅರಣ್ಯ ವಾಸಿಗಳು, ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.

ಸಮಾವೇಶದಲ್ಲಿ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಶಾಸಕ ನಾರಾಯಣಸ್ವಾಮಿ, ಪ್ರೊ. ಇಂದಿರಾ ಕೃಷ್ಣಪ್ಪ, ದಲಿತ ಸಂಘರ್ಷ ಸಮಿತಿಯ ಮುಖಂಡರುಗಳಾದ ಮಣಿಪಾಲ್‌ ರಾಜಪ್ಪ, ಮುನಿನಂಜಪ್ಪ, ವರ್ತೂರು ರವಿಕುಮಾರ್‌, ದಶರಥ್‌ ಮಾರಗೊಂಡನಹಳ್ಳಿ, ಬಾಲಕೃಷ್ಣ ಶ್ರೀರಾಂಪುರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon