ಗೋವಾ ಕನ್ನಡಿಗರ ನಿಂದನೆ ಖಂಡಿಸಿ ಸಮಾಲೋಚನಾ ಸಭೆ

WhatsApp
Telegram
Facebook
Twitter
LinkedIn

ಗೋವಾ/ ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗೋವಾದಲ್ಲಿನ ಎಲ್ಲಾ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಗೋವಾ ಗಡಿ ಕನ್ನಡಿಗರ ಸಮಸ್ಯೆಗಳ ಕುರಿತು ಗೋವಾ ಕನ್ನಡಿಗರ ಸಮಾಲೋಚನಾ ಸಭೆಯನ್ನು ಗೋವಾದ ಝರಿ ಜುವಾರಿನಗರದ ಶ್ರೀ ಯಲಾಲಿಂಗೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ವಿಶೇಷವಾಗಿ ಗೋವಾದಲ್ಲಿ ನೆಲೆಸಿರುವ ಜನರು ತಮ್ಮದೇ ವಿವಿಧ ಕ್ಷೇತ್ರಗಳಲ್ಲಿ, ಕಾರ್ಯ ನಿರ್ವಹಿಸುತ್ತಾ ಬಂದಿರುವ ಗೋವಾ ಗಡಿ ಕನ್ನಡಿಗರನ್ನು ‘ಘಾಟಿ ಲೋಗ್’ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಸಂಭೋದಿಸಿ, ಹಿಯಾಳಿಸುತ್ತಿರುವುದು ಅವರ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಒಂದು ರೀತಿಯ ಜನಾಂಗೀಯ ನಿಂದನೆಯಾಗುವುದಾಗಿ ಅನೇಕ ಗೋವಾ ಕನ್ನಡಿಗರು ನೊಂದು ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು, ಕೂಡಲೇ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಹಾಗೂ ಗೋವಾ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕರ್ನಾಟಕ ಸರ್ಕಾರದ ಐಜಿಪಿ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿ ಗೋವಾ ಸರ್ಕಾರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಈ ವಿಷಯದ ಕುರಿತು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಗೋವಾ ಕನ್ನಡಿಗರ ಜನಾಂಗೀಯ ನಿಂದನೆಯ ಕುರಿತು ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಕೇಂದ್ರ ಸರ್ಕಾರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗದ ಮೂಲಕ ಗೋವಾ ಸರ್ಕಾರಕ್ಕೆ ಸೂಕ್ತ ಸಲಹೆ ನೀಡುವಂತೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.

ಕನ್ನಡಿಗರ ನಿಂದನೆಗೆ ಪ್ರತಿಕ್ರಿಯೆಯಾಗಿ ಸ್ಥಳೀಯ ಕನ್ನಡಿಗರಿಂದ ಒಂದು ಮೌನ ಪ್ರತಿಭಟನೆಯ ಮೂಲಕ ಗೋವಾ ಸರ್ಕಾರದ ಗಮನ ಸೆಳೆಯಲು ಮುಂದಿನ ದಿನಗಳಲ್ಲಿ ರೂಪುರೇಷೆ ಹಾಕಿಕೊಳ್ಳಲು ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿ.ಕಾಂಡವೇಲು ಅವರನ್ನು ಭೇಟಿ ಮಾಡಿ ಗಡಿ ಪ್ರಾಧಿಕಾರದಿಂದ ಗೋವಾದಲ್ಲಿ ಕನ್ನಡ ಭವನ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ನಿವೇಶನ ಖರೀದಿಸಿದ್ದು. ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಯಿತು. ಗೋವಾ ರಾಜ್ಯದ ವಿವಿಧ ಇಲಾಖೆಗಳಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ, ನಗರ ಯೋಜನೆ ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿ ಕೂಡ ಮನವಿ ಸಲ್ಲಿಸಲಾಯಿತು.

ಗಡಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ನಾಟೀಕರ್, ಗೋವಾ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಣ್ಣ ಮೇಟಿ, ಮುರಳಿ ಮೋಹನ್ ಶೆಟ್ಟಿ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon