ಬೆಂಗಳೂರು: ಹಿಂದೂ ಧರ್ಮದ ಜಗದ್ಗುರು ಶಂಕರಚಾರ್ಯರ ಜಯಂತಿ ಆಚರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಅವರ ಜನ್ಮ ದಿನವನ್ನು ತತ್ವಜ್ಞಾನಿಗಳ ದಿನವನ್ನಾಗಿ ಮಾಡಬೇಕೆಂದು ನಿರ್ಧರಿಸಿರುವುದು ಸಮಂಜಸವಾಗಿದೆ ಎಂದು ಶಾಸಕ ಕೆ.ಗೋಪಾಲಯ್ಯ ಹೇಳಿದರು.
ಮಂಗಳವಾರ ಮಹಾಲಕ್ಷ್ಮಿ ಪುರ ಆಚಾರ್ಯ ಶಂಕರ ಜಯಂತಿ, ತತ್ವಜ್ಞಾನಿಗಳ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ರಾಷ್ಟ್ರಕ್ಕೆ ನಾಲ್ಕು ಗುರುಪೀಠಗಳನ್ನು ಕೊಟ್ಟ ಮಹಾನ್ ತತ್ವಜ್ಞಾನಿ ಶಂಕರಾಚಾರ್ಯರಾಗಿದ್ದಾರೆ. ಅವರ ಸ್ಮರಣಾರ್ಥ ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಮಹಾಲಕ್ಷ್ಮೀ ಲೇಔಟ್ ನಲ್ಲಿ ನನ್ನ ಅನುದಾನದಲ್ಲಿ ಕ್ಷೇತ್ರದ ಜನರ ಜತೆ ಮಾತುಕತೆ ನಡೆಸಿ ಇವರ ಮೂರ್ತಿಯನ್ನು ಸ್ಥಾಪಿಸಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.
ದೇವತೆಗಳು ಇರುವ ಕ್ಷೇತ್ರವೆಂದರೆ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರವಾಗಿದೆ ಹಾಗಾಗಿ ಮಹಾಲಕ್ಷ್ಮಿ ಲೇಔಟ್ ನಲ್ಲಿ ಶಂಕರಾಚಾರ್ಯರ ಪ್ರತಿಮೆ ಸ್ಥಾಪಿಸಿ ಮುಂದಿನ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಹೈಕೋರ್ಟ್ ನ್ಯಾಯಾದೀಶ ಶ್ರೀಶಾನಂದ ಮಾತನಾಡಿ, ಮನುಷ್ಯನಿಗೆ ಜೀವನದ ಸತ್ಯಗಳನ್ನು ಅಳವಾಗಿ ಅರ್ಥೈಸಿಕೊಂಡು ಅವುಗಳನ್ನು ಮೈಗೊಡಿಸಿಕೊಳ್ಳುವುದು ನಿಜವಾದ ತತ್ವಜ್ಞಾನ ಎಂದು ಹೇಳಿದರು.
ತತ್ವಜ್ಞಾನಿಗಳ ದಿನಾಚರಣೆ ಅಂಗವಾಗಿ ಬ್ರಾಹ್ಮಣ ಸಮುದಾಯದ ಐದು ಮಂದಿ ವಿದ್ವಾಂಸರಿಗೆ ಶಂಕರ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಮಲ್ಹಾರಿರಾವ್, ಮಹಾಲಕ್ಷ್ಮಿ ಪುರ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ. ರಾಘವೇಂದ್ರ ಭಟ್ ಮತ್ತಿತರರು ಭಾಗವಹಿಸಿದ್ದರು.















