ಬೆಂಗಳೂರು: ಮುಖ್ಯ ರಸ್ತೆಗಳಿಂದ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುತ್ತಿರುವ ಕ್ರಮವನ್ನು ಖಂಡಿಸಿ ವಿವಿಧ ಬೀದಿ ವ್ಯಾಪಾರಿ ಸಂಘಟನೆಗಳ ಜಂಟಿ ಹೋರಾಟ ಸಮಿತಿಯು ಜು. 8ರಂದು ಬೆಂಗಳೂರು ಬೀದಿ ವ್ಯಾಪಾರ ಬಂದ್ ಹಾಗೂ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.
ಈ ಕುರಿತು ಸೋಮವಾರ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡ, ಕರುನಾಡು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುರೇಸ್, ಯಾವುದೇ ಪೂರ್ವ ಲಿಖಿತ ನೋಟಿಸ್ ನೀಡದೆ ಅಧಿಕಾರಿಗಳು ಜೆಸಿಬಿ ಯಂತ್ರಗಳೊಂದಿಗೆ ತೆರವು ಕಾರ್ಯಾಚರಣೆ ನಡೆಸಿ, ಗಾಡಿಗಳು ಮತ್ತು ವ್ಯಾಪಾರ ಸಾಮಗ್ರಿಗಳನ್ನು ಜಪ್ತಿ ಮಾಡುತ್ತಿದ್ದಾರೆ. ಇದರಿಂದ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ತೀವ್ರ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಸುಮಾರು 1.5 ಲಕ್ಷ ಬೀದಿ ವ್ಯಾಪಾರಿಗಳಿದ್ದು, ಅವರಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿಗೆ ಕೇಂದ್ರದ ಪಿಎಂ-ಸ್ವನಿಧಿ ಯೋಜನೆಯಡಿ ಸಾಲ ನೀಡಲಾಗಿದೆ. ಆದರೆ 2024ರ ಅಕ್ಟೋಬರ್‌ನಿಂದ 2025ರ ಫೆಬ್ರುವರಿ ಅವಧಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಕೇವಲ 24 ಸಾವಿರ ವ್ಯಾಪಾರಿಗಳನ್ನು ಮಾತ್ರ ಗುರುತಿಸಲಾಗಿದೆ. ಸಮಗ್ರ ಸಮೀಕ್ಷೆ ಪೂರ್ಣಗೊಳ್ಳುವ ಮುನ್ನವೇ ವ್ಯಾಪಾರಿಗಳನ್ನು ತೆರವುಗೊಳಿಸುವುದು ಬೀದಿ ವ್ಯಾಪಾರಿಗಳ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.














