ಖಾನಾಪುರ: ಪಾರವಾಡ ಗ್ರಾಪಂ ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಪ್ರಜಾ ನೆರಳು ದಿನ ಪತ್ರಿಕೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ವರದಿ ಮಾಡುತ್ತಿದೆ. ಈ ಗ್ರಾಪಂ ನಲ್ಲಿ ಹಿಂದೆ ಪಿಡಿಒ ಆಗಿದ್ದ ವೀರೇಶ ಸಜ್ಜನ ಅವರ ಅವಧಿಯಲ್ಲಿ ಹಲವಾರು ಭ್ರಷ್ಟಾಚಾರ ನಡೆದಿರುವುದನ್ನು ಪತ್ರಿಕೆಯು ಸಾಕ್ಷಿ ಸಮೇತ ಬಯಲು ಮಾಡಿತ್ತು. ಈಗ ಅದರ ಮುಂದಿನ ಭಾಗವಾಗಿ, ವೀರೇಶ ಸಜ್ಜನ ಅವರು ರಾಜಾರೋಷವಾಗಿ ಲಂಚಕ್ಕೆ ಬೇಡಿಕೆ ಇಡುವ ಸ್ಫೋಟಕ ಆಡಿಯೋ ಒಂದನ್ನು ಇಂದು ಬಿಡುಗಡೆ ಮಾಡುತ್ತಿದೆ.
2023ನೇ ಇಸ್ವಿಯಲ್ಲಿ ಗುತ್ತಿಗೆದಾರರೊಬ್ಬರಿಗೆ ಫೋನ್ ಮಾಡಿ ಹಣ ನೀಡುವಂತೆ ಸಜ್ಜನ ಅವರು ಧಮ್ಕಿ ಹಾಕಿರುವುದು ಸ್ಫೋಟಕ ಆಡಿಯೋದಲ್ಲಿ ಇದೆ. ಮುಂಗಡವಾಗಿ ಲಂಚ ನೀಡದಿದ್ದರೆ ಎನ್.ಎಂ.ಆರ್ ಹಾಕುವುದಿಲ್ಲ ಎಂದು ಸಜ್ಜನ ನೇರವಾಗಿ ಬೆದರಿಕೆ ಹಾಕುತ್ತಾರೆ. ಅಷ್ಟೇ ಅಲ್ಲ ಗುತ್ತಿಗೆದಾರನಿಗೆ ದಬ್ಬಾಳಿಕೆ ಮಾಡಿ ತನ್ನ ಹೆಂಡತಿಯ ಅಕೌಂಟ್ ಗೆ ಫೋನ್ ಪೆ ಮೂಲಕ 2023ರ ಸೆಪ್ಟೆಂಬರ್ 1 ರಂದು 21,500 ರೂ. ಹಾಗೂ 8,100 ಹೀಗೆ ಒಟ್ಟು 29,600 ರೂಪಾಯಿ ಲಂಚವನ್ನು ಪಡೆದುಕೊಂಡಿದ್ದಾರೆ. ಈ ಲಂಚ ವ್ಯವಹಾರದ ಫೋನ್ ಪೆ ದಾಖಲೆಗಳು ಪತ್ರಿಕೆಯ ಬಳಿ ಇವೆ.
13 ವರ್ಷಗಳಿಂದ ಪಾರವಾಡ ಪಂಚಾಯ್ತಿಯಲ್ಲಿಯೇ ನೌಕರಿ ಮಾಡಿರುವ ಈ ಭೂಪ ತನ್ನ ದಬ್ಬಾಳಿಕೆ ಹಾಗೂ ದೌರ್ಜನ್ಯದಿಂದ ಇಡೀ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡಿದ್ದಾನೆ. ಕಂಡ ಕಂಡಲ್ಲಿ, ಅವಕಾಶ ಸಿಕ್ಕಲ್ಲಿ ಹಣ ನುಂಗುತ್ತ ಮುಗ್ಧ ಮರಾಠಿ ಭಾಷಿಕರ ಮೇಲೆ ಅನ್ಯಾಯ ಮಾಡುತ್ತ, ತನಗೆ ಕೋಟ್ಯಂತರ ಆಸ್ತಿ ಪಾಸ್ತಿ ಮಾಡಿಕೊಂಡಿರುವ ಈ ನುಂಗಣ್ಣನ 13 ವರ್ಷಗಳ ಅವಧಿಯ ಬಗ್ಗೆ ಲೋಕಾಯುಕ್ತ ತನಿಖೆ ನಡೆಯಲಿ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ನುಂಗಣ್ಣ ವೀರೇಶ ಸಜ್ಜನ ಅವರು ಗುತ್ತಿಗೆದಾರನೊಂದಿಗೆ ಮಾತನಾಡಿದ ಆಡಿಯೋ ಇಲ್ಲಿದೆ:
AUDIO 1:
AUDIO 2:
ಸಂಭಾಷಣೆಯ ಪೂರ್ತಿ ವಿವರ ಕನ್ನಡದಲ್ಲಿ ಹೀಗಿದೆ:
ಆಡಿಯೊ 1:
ಪಿಡಿಒ ಸಜ್ಜನ: ಹಲೋ.. ನಾಳೆ ದುಡ್ಡು ಬೇಕು
ಗುತ್ತಿಗೆದಾರ: ನಾಳೆ.. ಹಾಂ ಸರ್.. ಕೊಡ್ತೀನಿ
ಪಿಡಿಒ ಸಜ್ಜನ: ಮಾಡೋಣ ನೋಡೋಣ ಎಲ್ಲ ನಡೆಯಲ್ಲ. ನಾಳೆ ದುಡ್ಡು ಬರದಿದ್ದರೆ ಎನ್.ಎಂ.ಆರ್ ಹಾಕಲ್ಲ. ನಿನಗೆ ನೇರವಾಗಿ ಹೇಳುತ್ತಿರುವೆ. ಏನೇ ಆದರೂ ನಾಳೆ ದುಡ್ಡು ಬರಬೇಕು. ನಂತರ ಕೊಡ್ತೀನಿ, ಸ್ವಲ್ಪ ಸ್ವಲ್ಪ ಕೊಡ್ತೀನಿ ಅಂದರೆ ನಾನು ಎನ್.ಎಂ.ಆರ್ ಹಾಕೋದೇ ಇಲ್ಲ. ಈಗಾಗಲೇ ಜಿಯೋ ಟ್ಯಾಗ್ ಆಗಿದ್ದು, ನಾಳೆ ಅಪಲೋಡ್ ಮಾಡಬೇಕಿದೆ. ಹಣ ಬರದಿದ್ದರೆ ನಾನು ಎನ್.ಎಂ.ಆರ್ ಹಾಕೋದೇ ಇಲ್ಲ ಎಂಬುದು ಗೊತ್ತಿರಲಿ.
ಆಡಿಯೊ 2:
ಪಿಡಿಒ ಸಜ್ಜನ: ನಿಮ್ಮ ಕೈಯಿಂದ ಹಣ ಕೊಡಲು ಆಗುತ್ತದೆಯಾ ಇಲ್ಲವಾ ಅಷ್ಟೇ ಹೇಳಿ. ಅದು ಬಿಟ್ಟು ನಂತರ ನನ್ನ ಮೇಲೆ ಏನಾದರೂ ತಂದರೆ ನಾನು ಯಾರನ್ನೂ ಬಿಡುವುದಿಲ್ಲ. ಯಾರೇ ಆಗಿದ್ದರೂ ನನಗೆ ಏನೂ ಮಾಡಲು ಆಗಲ್ಲ. ಯಾರು ಎಷ್ಟೇ ದೊಡ್ಡವರಾಗಿದ್ದರೂ ನನಗೆ ಏನೂ ಮಾಡಲು ಸಾಧ್ಯವಿಲ್ಲ. ನಾನು ಪದೇ ಪದೆ ಇದನ್ನೇ ಹೇಳುತ್ತ ಇರಲು ಆಗದು.
ಗುತ್ತಿಗೆದಾರ: ಹಾಗೇನಿಲ್ಲ.. ಕೊಡ್ತೀನಿ ಸಾರ್.













