ಬೆಂಗಳೂರು: ಅಯೋದ್ಯೆ ರಾಮಮಂದಿರ ಸಮಿತಿಯವರಿಂದ ಭ್ರಷ್ಟಾಚಾರ ನಡೆದಿದೆ ಎಂದ ಮಾತ್ರಕ್ಕೆ ರಾಮ ಮತ್ತು ಮಂದಿರ ಮೇಲೆ ಇರುವ ಭಕ್ತಿ,ನಂಬಿಕೆಯನ್ನು ಯಾರೂ ಕಳೆದುಕೊಳ್ಳಬಾರದು ಎಂದು ಬಾಲರಾಮನ ದಿವ್ಯ ವಿಗ್ರಹದ ಶಿಲ್ಪಿ, ಖ್ಯಾತ ಕಲಾವಿದ ಅರುಣ್ ಯೋಗಿರಾಜ್ ಕರೆ ನೀಡಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಸಮಯದಲ್ಲಿ ನಾನು ಒಂಬತ್ತು ತಿಂಗಳ ಕಾಲ ರಾಮಲಲಮೂರ್ತಿ ನಿರ್ಮಾಣ ಕಾರ್ಯದಲ್ಲಿ ಅಯೋದ್ಯೆಯಲ್ಲಿದ್ದೆ, ಆಗ ರಾಮಮಂದಿರ ನಿರ್ಮಾಣ ಸಮಿತಿ ಪಾರದರ್ಶಕವಾಗಿ ನಡೆದುಕೊಂಡಿದೆ. ಆಗ ಪ್ರತಿ ಸಣ್ಣ ವಿಚಾರವನ್ನು ಸಭೆಯಲ್ಲಿ ಪಾರದರ್ಶಕವಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತಿತು, ಕೇವಲ ಮಂಚದ ಮೇಲೆ ಮಲಗುವ ಮೂಲಕ ಅತ್ಯಂತ ಸರಳ ಜೀವನದಲ್ಲಿ ಕಾಲ ಕಳೆದು ಮಂದಿರ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ಎಲ್ಲರೂ ವಹಿಸಿದ್ದರು. ಆದರೆ ಈಗ ಸಮಿತಿ ಭ್ರಷ್ಟಾಚಾರ ನಡೆಸಿದೆ ಎಂಬ ವಿಚಾರ ಕೇಳಿ ಆಶ್ಚರ್ಯವಾಗಿದೆ. ತನಿಖೆ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದರು.
ಒಂದು ಸುಂದರ ಮೂರ್ತಿಯನ್ನು ಸೃಷ್ಟಿಸಲು ಕೇವಲ ಪರಿಶ್ರಮ ಸಾಕಾಗುವುದಿಲ್ಲ; ಅದರೊಂದಿಗೆ ಶ್ರದ್ಧೆ, ಭಕ್ತಿ ಮತ್ತು ಕೆಲಸದ ಮೇಲಿನ ಪ್ರೀತಿಯೂ ಇರಬೇಕು. ಶಿಲ್ಪಕಲೆ ಕೇವಲ ವೃತ್ತಿಯಲ್ಲ, ಅದು ಒಂದು ಸಾಧನೆ ಮತ್ತು ತಪಸ್ಸು. ಈ ಕಾರಣಕ್ಕೆ ಮೈಸೂರಿನ ಹೊರವಲಯದಲ್ಲಿ ಹೊಸದಾಗಿ ಅತ್ಯಾಧುನಿಕ ಕಲಾಮಂದಿರ ಮತ್ತು ಶಿಲ್ಪಕಲಾ ತರಬೇತಿ ಕೇಂದ್ರ ನಿರ್ಮಿಸಿದ್ದೇನೆ. ಹೊಸ ತಲೆಮಾರಿನ ಯುವಕರು ಹಾಗೂ ಕಲಾಸಕ್ತರಿಗೆ ಶಾಸ್ತ್ರೋಕ್ತ ಮತ್ತು ಗುಣಮಟ್ಟದ ಶಿಲ್ಪಕಲಾ ಶಿಕ್ಷಣ ನೀಡುವ ಉದ್ದೇಶದಿಂದ ಕೆತ್ತನೆ ಸೌಲಭ್ಯಗಳನ್ನು ಅಲ್ಲಿ ನೀಡಲಾಗಿದೆ ಎಂದು ತಿಳಿಸಿದರು.
ಭಾರತೀಯ ಶಿಲ್ಪಕಲೆಯ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಪೀಳಿಗೆಯು ಹೆಚ್ಚಿನ ಆಸಕ್ತಿ ತೋರಬೇಕು. ಇತ್ತೀಚಿನ ವರ್ಷಗಳಲ್ಲಿ ಕಲ್ಲಿನ ಶಿಲ್ಪಕಾರರಿಗೆ ಸಮಾಜದಲ್ಲಿ ಉತ್ತಮ ಮನ್ನಣೆ ಮತ್ತು ಗೌರವ ದೊರೆಯುತ್ತಿರುವುದು ಸಂತೋಷದಾಯಕ ಬೆಳವಣಿಗೆ ಎಂದು ಹೇಳಿದರು.
ಅರುಣ್ ಯೋಗಿರಾಜ್ ರನ್ನು ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ದತ್ತಿಯ ವತಿಯಿಂದ ಗೌರವಿಸಲಾಯಿತು. ಯೋಗ ಕ್ಷೇತ್ರದ ಹಿರಿಯ ಸಾಧಕರಿಗೆ ಗೌರವ ಯೋಗದ ಪ್ರಸಾರ ಮತ್ತು ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಹಿರಿಯ ಸಾಧಕರನ್ನು ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ದಶಕಗಳ ಕಾಲ ಯೋಗ ಶಿಕ್ಷಣ, ತರಬೇತಿ ಹಾಗೂ ಯೋಗದ ಮೌಲ್ಯಗಳನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸುವಲ್ಲಿ ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ವಿರೂಪಾಕ್ಷ ಬೆಳವಾಡಿ ಅವರಿಗೆ ಯೋಗ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅದೇ ರೀತಿ ಯೋಗಾಭ್ಯಾಸ, ಯೋಗ ಪ್ರಚಾರ ಹಾಗೂ ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಸಲ್ಲಿಸಿದ ಮಹತ್ವದ ಸೇವೆಯನ್ನು ಗುರುತಿಸಿ ಅಶೋಕ ವಿ. ಅವರಿಗೆ ಯೋಗ ಶ್ರೀ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಗಮನ ಸೆಳೆದ ಯೋಗ ಪ್ರದರ್ಶನಗಳು:
ಕಾರ್ಯಕ್ರಮದಲ್ಲಿ ಹಿರಿಯ ಯೋಗ ಶಿಕ್ಷಕರು, ಯೋಗ ಸಾಧಕರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಯೋಗ ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾದ ಗುಂಪು ಯೋಗ ಪ್ರದರ್ಶನಗಳು, ವೈಯಕ್ತಿಕ ಯೋಗಾಸನ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಆರೋಗ್ಯಕರ ವಯಸ್ಸಿಗೆ ಯೋಗ ಎಂಬ ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಯೋಗಾಭಿಮಾನಿಗಳು, ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಮಹಾಲಕ್ಷ್ಮೀಪುರಂ ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್‌ನ ಟ್ರಸ್ಟೀ ನಾಗೇಶ ರಾವ್ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದರು.















