ಬೆಂಗಳೂರು: ಸಂಜಯನಗರದ ಶಿಕ್ಷಾ ಸಾಗರ್ ಸ್ಕೂಲ್ ವಾರ್ಷಿಕೋತ್ಸವ ಅತ್ಯಂತ ವಿಜೃಂಭಣೆಯಿಂದ ಕಣ್ಮನ ಸೆಳೆಯುವ ರೀತಿಯಲ್ಲಿ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಜರುಗಿತು.
ಈ ಬಾರಿಯ ವಾರ್ಷಿಕೋತ್ಸವದಲ್ಲಿ ಪ್ರಸಿದ್ಧ ಹಾಲಿವುಡ್ ಚಲನಚಿತ್ರ ‘ದಿ ಸೌಂಡ್ ಆಫ್ ಮ್ಯೂಸಿಕ್’ ಕಥಾಹಂದರವನ್ನು ಆಧರಿಸಿದ ಥೀಮ್ ಅನ್ನು ಪ್ರದರ್ಶಿಸಲಾಯಿತು. ಇದು ಎಲ್ಲರ ಮೆಚ್ಚುಗೆಯನ್ನು ಕೂಡ ಗಳಿಸಿತು. ನರ್ಸರಿಯಿಂದ ಹತ್ತನೇ ತರಗತಿಯವರೆಗೆ ಸುಮಾರು 630ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಗೀತ ನಾಟಕ ಮತ್ತು ನೃತ್ಯ ರೂಪಕದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ಹಳೆಯ ಕಾಲದ ಕ್ಲಾಸಿಕ್ ಚಲನಚಿತ್ರದ ಥೀಮ್ ಅನ್ನು ಇಂದಿನ ಮಕ್ಕಳಿಗೆ ತಕ್ಕಂತೆ ತರಬೇತಿ ನೀಡಿ ರೂಪಿಸಲಾಗಿತ್ತು. ಮಕ್ಕಳು ಕೂಡ ಅತ್ಯಂತ ಆತ್ಮವಿಶ್ವಾಸದಿಂದ ರೂಪಕದ ಪ್ರದರ್ಶನವನ್ನು ನೀಡಿದರು. ಕಲಾ ಗ್ರಂಥ ಆರ್ಟ್ ಗ್ರೂಪ್ ಸಂಸ್ಥಾಪಕ ಡಾ ಶರತ್ ಹಾಗೂ ಅವರ ತಂಡದ ಸಹಕಾರದಿಂದ ನೃತ್ಯ ಮತ್ತು ಸಂಗೀತ ಸಂಯೋಜನೆ ಅತ್ಯುತ್ತಮವಾಗಿ ಮೂಡಿಬಂದಿತು. ಸ್ಕೂಲ್ ಮ್ಯಾನೇಜ್ಮೆಂಟ್ ಅಧ್ಯಕ್ಷೆ ಕನ್ನಿಕಾ ಪರಮೇಶ್ವರಿ, ನಿರ್ದೇಶಕಿ ಅನುಸೂಯ, ಮುಖ್ಯೋಪಾಧ್ಯಾಯರಾದ ಅಪ್ಸರಾ, ಹೆಡ್ ಮಾಸ್ಟರ್ ದೇವರಾಜ್ ಹಾಗೂ ಪ್ರಾಂಶುಪಾಲೆ ಮಿನಿ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಈ ಬೃಹತ್ ನೃತ್ಯ ರೂಪಕ ಯಶಸ್ವಿಯಾಗಿ ನಡೆಯಿತು.
ಮಕ್ಕಳ ಆಕರ್ಷಕ ವೇಷಭೂಷಣಗಳು ಮತ್ತು ಸಮನ್ವಯತೆ ನೋಡುಗರನ್ನು 1960 ಹಾಗೂ 70ರ ದಶಕದ ದಿನಗಳಿಗೆ ಕೊಂಡೊಯ್ಯುವಂತಿತ್ತು. ಈ ಅದ್ಧೂರಿ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ಚಲನಚಿತ್ರ ನಟಿ ಶಾನ್ವಿ ಶ್ರೀವಾಸ್ತವ ಅವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆಯನ್ನು ಕಡಿಮೆ ಮಾಡಿ, ಪಠ್ಯೇತರ ಚಟುವಟಿಕೆಗಳು ಹಾಗೂ ಕಲಾತ್ಮಕ ಹವ್ಯಾಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಒಟ್ಟಿನಲ್ಲಿ ಶಾಲಾ ಸಿಬ್ಬಂದಿ ಹಾಗೂ ಪೋಷಕರ ಒಕ್ಕೂರಲಿಂದ ಮೂಡಿಬಂದ ಈ ವಿಶಿಷ್ಟ ವಾರ್ಷಿಕೋತ್ಸವ ಸಮಾರಂಭ ಎಲ್ಲರ ನೆನಪಿನಲ್ಲಿ ಉಳಿಯುವಂತಹ ಐತಿಹಾಸಿಕ ಕಾರ್ಯಕ್ರಮವಾಯಿತು.













