ಬೆಂಗಳೂರು: ಮಾನಸಿಕ ಆರೋಗ್ಯ ಸಮಸ್ಯೆ ಇಂದು ಅಂತಾರಾಷ್ಟ್ರೀಯ ಮಟ್ಟದ ಸವಾಲಾಗಿ ಹೊರಹೊಮ್ಮಿದ್ದು, ದೇಶ-ವಿದೇಶಗಳ ಗಮನ ಸೆಳೆದಿದೆ. ಈ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ನಿಟ್ಟಿನಲ್ಲಿ ‘ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ-2017’ ರ ಪರಿಣಾಮಕಾರಿ ಅನುಷ್ಠಾನದ ಮೂಲಕ ಕರ್ನಾಟಕ ರಾಜ್ಯವು ಇಡೀ ದೇಶಕ್ಕೇ ಮಾದರಿಯಾಗಿದೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರಾದ ಯು.ಟಿ. ಖಾದರ್ ಫರೀದ್ ತಿಳಿಸಿದರು.
ನಗರದ ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹಾಗೂ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಸಹಯೋಗದೊಂದಿಗೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯದ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ-2017 ಮತ್ತು ನಿಯಮಗಳ ಅಡಿಯಲ್ಲಿ ಭಾಗಿದಾರರ ಪಾತ್ರ ಹಾಗೂ ಹೊಣೆಗಾರಿಕೆಗಳು ವಿಷಯದ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರೀಕರಣ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಮಾನಸಿಕ ರೋಗಿಗಳಿಗೆ ನೆರವಾಗುವ ಅಗತ್ಯವಿದೆ. ಇದಕ್ಕಾಗಿ ತರಬೇತಿ ಪಡೆದ ಪಡೆಯನ್ನು ಸೃಜಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ವರ್ಗದ ಜನರನ್ನು ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಬದಲಾದಂತೆ ಕಾಯ್ದೆಗಳೂ ಬದಲಾಗಬೇಕು. ಇಂತಹ ಕಾರ್ಯಾಗಾರಗಳು ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಕಾಯ್ದೆಗಳ ತಿದ್ದುಪಡಿಗೆ ಸಹಕಾರಿಯಾಗಲಿದ್ದು, ಇಲ್ಲಿ ಬರುವ ಸಲಹೆ-ಸೂಚನೆಗಳನ್ನು ಜಾರಿಗೆ ತರಲು ಸರ್ಕಾರ ಕ್ರಮವಹಿಸಲಿದೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಕುರಿತು ತರಬೇತಿ ನೀಡುವ ಹಾಗೂ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಯೋಜಿಸಲಾಗುತ್ತಿದೆ. ಇಂದಿನ ದಿನಗಳಲ್ಲಿ ಉಪಕಾರ ಮಾಡುವ ಬದಲು ಉಪದ್ರವ ನೀಡುವತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದು, ಇದು ಸಹ ಒಂದು ರೀತಿಯ ಮಾನಸಿಕ ರೋಗದ ಲಕ್ಷಣವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಮಾನಸಿಕ ವಿಭಾಗದ ಅಧ್ಯಕ್ಷ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನಿಕಟಪೂರ್ವ ನ್ಯಾಯಮೂರ್ತಿ ಎನ್. ಕುಮಾರ್ ಅವರು ಮಾತನಾಡಿ, ಈ ವರ್ಷದ ಧೈಯವಾಕ್ಯ ‘ಅನುಭವಿಸಿದವರ ಮಾತಿಗೆ ಕಿವಿಗೊಡೋಣ – ನೈಜ ಬದಲಾವಣೆಗಳು ಮತ್ತು ನೈಜ ಧ್ವನಿಗಳು’ ಅತ್ಯಂತ ಸೂಕ್ತವಾಗಿದೆ. ನಾವು ಕೇವಲ ಕಾಯ್ದೆಗಳನ್ನು ತಂದು ನಮಗೆ ತೋಚಿದ್ದನ್ನು ಮಾನಸಿಕ ರೋಗಿಗಳ ಮೇಲೆ ಹೇರುತ್ತಿದ್ದೇವೆಯೇ ವಿನಃ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಕೇಳಿಲ್ಲ. ಮಾನಸಿಕ ರೋಗಿಗಳನ್ನು ನಿರ್ಲಕ್ಷಿಸುವ ಸಮಾಜ ಮೊದಲು ತನ್ನನ್ನು ತಾನು ವಿಮರ್ಶಿಸಿಕೊಳ್ಳಬೇಕು. ಅಲ್ಲದೆ, ಪೊಲೀಸರು ಸಿಕ್ಕ ಮಾನಸಿಕ ರೋಗಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು ಮತ್ತು ನ್ಯಾಯಾಧೀಶರು ಮಾನವೀಯತೆಯಿಂದ ಅವರಿಗೆ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷೆ ಅನು ಸಿವರಾಮನ್ ಮಾತನಾಡಿ, ರಾಜ್ಯದಲ್ಲಿ ಮಾನಸಿಕ ರೋಗಿಗಳನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಕಾಳಜಿ ಮತ್ತು ಕಾನೂನಾತ್ಮಕವಾಗಿ ನೋಡಿಕೊಳ್ಳಲಾಗುತ್ತಿದೆ. ಪ್ರತಿ ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಇಂತಹ ಸಮಸ್ಯೆಗಳನ್ನು ಬಗೆಹರಿಸುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ರಾಜ್ಯ ಹಾಗೂ ತಾಲೂಕು ಮಟ್ಟದ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಪ್ರತ್ಯೇಕ ಕಾನೂನು ನೆರವು ಮತ್ತು ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದರು.













