ಖಾನಾಪುರ: ತಾಲೂಕಿನ ಜಾಂಬೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಬ್ಬನಹಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಶಾಸಕ ವಿಠ್ಠಲ ಹಲಗೇಕರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಗಣಿಗಾರಿಕೆಗೆ ಅನುಮತಿ ನೀಡುತ್ತಿದ್ದರೆ, ಹಳ್ಳದಲ್ಲಿ ಲಭ್ಯವಿರುವ ಮರಳನ್ನು ತೆಗೆಯಲು ಕೂಡ ಕಾನೂನುಬದ್ಧವಾಗಿ ಅನುಮತಿ ನೀಡಬೇಕು. ಹಳ್ಳದಿಂದ ತೆಗೆಯುವ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು, ನಿಯಮಾನುಸಾರ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ಪ್ರಕ್ರಿಯೆಯಿಂದ ಖಾನಾಪುರ ತಾಲೂಕಿನ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳು ದೊರೆಯಲಿದ್ದು, ಜನರಿಗೆ ಆರ್ಥಿಕ ನೆರವು ಸಿಗಲಿದೆ. ವಿಬಿ-ಜಿ ರಾಮ್-ಜಿ ಯೋಜನೆಯಡಿ ಈ ಕಾರ್ಯವನ್ನು ನಿಯಮಾನುಸಾರ ಕೈಗೊಳ್ಳಬೇಕು. ಹಬ್ಬನಹಟ್ಟಿ ಗ್ರಾಮದಲ್ಲಿನ ಗಣಿಗಾರಿಕೆ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವುದರ ಜೊತೆಗೆ, ಸ್ಥಳೀಯ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.














