ಬಿಡಿಪಿಸಿ ವತಿಯಿಂದ ಬಂಗಾಳಿ ದುರ್ಗಾ ಪೂಜಾ ಮಹೋತ್ಸವ

WhatsApp
Telegram
Facebook
Twitter
LinkedIn

ಬೆಂಗಳೂರು: ಬೆಂಗಳೂರು ದುರ್ಗಾ ಪೂಜಾ ಸಮಿತಿ  (ಬಿಡಿಪಿಸಿ) ಅರಮನೆ ಮೈದಾನದಲ್ಲಿ ಆಯೋಜಿಸಿರುವ ದುರ್ಗಾ ಪೂಜಾ ಮಹೋತ್ಸವದಲ್ಲಿ ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಸಾಂಪ್ರದಾಯಿಕ, ಸಾಂಸ್ಕೃತಿಕ,ಸಾಹಿತ್ಯದ ಪರಂಪರೆಯನ್ನು ಜನತೆಗೆ ತಿಳಿಸುವ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ.

ಒಟ್ಟು ಆರು ದಿನಗಳ ಕಾಲ ಆಯೋಜಿಸಲಾಗಿರುವ ದುರ್ಗಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಬಂಗಾಳಿ ನಿವಾಸಿಗಳು ಕುಟುಂಬ ಸಮೇತರಾಗಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇಲ್ಲಿ ಮಾರಾಟಕ್ಕಿರುವ ಬಂಗಾಳದ ವಿವಿಧ ಉತ್ಪನ್ನಗಳು, ವಸ್ತ್ರಗಳು, ತಿಂಡಿ ತಿನಿಸುಗಳ ಮಳಿಗೆಗಳು ಎಲ್ಲರನ್ನು ಕೈಬೀಸಿ ಕರೆಯುತ್ತಿವೆ.

ಸ್ವಾಗತ ಕೋಣೆಯ ಹೊರಭಾಗದಲ್ಲಿ ಬೊಂಬೆಗಳ ಪ್ರದರ್ಶನ. ಕಾವೇರಿ ಮತ್ತು ಬಂಗಾಲದ ಸಂಸ್ಕೃತಿಯ ಸಂಮಿಶ್ರಣದೊಂದಿಗೆ ಟ್ಯಾಗೋರ್ ಮತ್ತು ಕರ್ನಾಟಕದ ನಡುವಿನ ಸಂಬಂಧವನ್ನು ಬಿಂಬಿಸುವ ಪೆವಿಲಿಯನ್ ಈ ಬಾರಿಯ ಉತ್ಸವದ ವಿಶೇಷತೆಯಾಗಿದೆ.

ಮಹೋತ್ಸವದ ಕುರಿತು ಸಂಯೋಜಕ ಅಚಿಂತ್ಯ ಲಾಲ್ ರಾಯ್ ಮಾತನಾಡಿ, ಬೆಂಗಳೂರು ದುರ್ಗಾ ಪೂಜಾ ಸಮಿತಿಯಿಂದ ಕಳೆದ ಅನೇಕ ವರ್ಷಗಳಿಂದ ದುರ್ಗಾ ಪೂಜಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ, 1975ರಲ್ಲಿ ಈ ಪೂಜಾ ಮಹೋತ್ಸವ ಪ್ರಾರಂಭವಾಗಿದೆ, ಈ ವರ್ಷ ಕೂಡ ವಿವಿಧ ಬಂಗಾಳಿ ಅತಿಥಿ ಗಣ್ಯರು ಭಾಗವಹಿಸಿದ್ದಾರೆ. ಮುಖ್ಯವಾಗಿ ನವರಾತ್ರಿಯ ಕೊನೆಯ ಮೂರು ದಿನಗಳ ಕಾಲ ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ವರ್ಷದ ಮಹಾಸಂಭ್ರಮದಲ್ಲಿ ಸುಮಾರು 150ಕ್ಕೂ ಅಧಿಕ ಸಂಘಟಕರು ಸಕ್ರಿಯವಾಗಿ ಶ್ರಮಿಸುತ್ತಿದ್ದಾರೆ. ಬೆಂಗಳೂರಿನ ಮೂಲೆಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಸಹ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಈ ಪೂಜೆಗೆ ಆಗಮಿಸುತ್ತಿದ್ದಾರೆ. ಜಾತಿ, ಧರ್ಮ, ಕುಲ ಅಥವಾ ಭಾಷೆಯ ಯಾವುದೇ ಭೇದಭಾವವಿಲ್ಲದೆ ಎಲ್ಲರಿಗೂ ಮುಕ್ತವಾಗಿರುವ ಉತ್ಸವ ಇದಾಗಿದೆ. ಸ್ಥಳೀಯ ಜನರ ಸಂಪೂರ್ಣ ಸಹಕಾರದಿಂದ ನಡೆಯುವ ಈ ಸಮಾರಂಭದಲ್ಲಿ ಬಂಗಾಳಿ ಮತ್ತು ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅಲ್ಲದೆ, ಆಹಾರದಂಗಡಿಗಳು ಹಾಗೂ ವಿವಿಧ ಮಳಿಗೆಗಳು ಸ್ಥಾಪನೆಯಾಗುವುದರಿಂದ ಆರ್ಥಿಕ ಸಮತೋಲನಕ್ಕೂ ಉತ್ಸವ ಸಹಕಾರಿಯಾಗಿದೆ ಎಂದರು.

ಮುಖ್ಯ ಸಂಯೋಜಕಿ ರುನ್ನಾ ರಾಯ್ ಮಾತನಾಡಿ, ದಕ್ಷಿಣ ಭಾರತದಲ್ಲಿ ನವರಾತ್ರಿಯನ್ನು ಒಂಬತ್ತು ದಿನಗಳ ಕಾಲ ಆಚರಿಸಿದರೆ, ಬಂಗಾಳಿ ಸಂಸ್ಕೃತಿಯಲ್ಲಿ ಇದು ನಾಲ್ಕು ದಿನಗಳ ವಿಶೇಷ ಹಬ್ಬವಾಗಿದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಿ ಪೂಜಿಸುತ್ತಾರೆ ಆದರೆ ಬಂಗಾಳಿಗಳು ಸಾರ್ವಜನಿಕ ಪಂಡಲ್‌ಗಳಲ್ಲಿ ದುರ್ಗಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಪಶ್ಚಿಮ ಬಂಗಾಳ ರಾಜ್ಯದ ಮಾದರಿಯಲ್ಲಿ ಇಲ್ಲಿಯೂ ಪ್ರತಿದಿನ ಅನ್ನಭೋಗ ಹಾಗೂ ಪುಷ್ಪಾಂಜಲಿಯನ್ನು ಮಾದುರ್ಗೆಗೆ ಸಲ್ಲಿಸಲಾಗುತ್ತಿದೆ. ಈ ಉತ್ಸವದಲ್ಲಿ ಕನ್ನಡಿಗರು, ತಮಿಳರು, ತೆಲುಗು ಹಾಗೂ ಮರಾಠಿ ಸೇರಿದಂತೆ ಎಲ್ಲಾ ಭಾಷೆಯ ಜನರು ಭಾಗವಹಿಸುತ್ತಿದ್ದಾರೆ ಎಂದು ನುಡಿದರು.

ಖಚಾಂಚಿ ಚಂದ್ರಶೇಖರ್ ಬಗ್ಚಿ ಮಾತನಾಡಿ, ಪೂಜಾ ಮಹೋತ್ಸವದಲ್ಲಿ ಸೌರವ್ ಗಂಗೂಲಿ, ಪ್ರಿಯಾಂಕಾ ಉಪೇಂದ್ರ, ಜಯರಾಮ್ ಕಾರ್ತಿಕ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು, ರಾಜಕಾರಣಿಗಳು ಹಾಗೂ ನಟರು ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಸದಸ್ಯರ ಸಾಮೂಹಿಕ ಪರಿಶ್ರಮ ಕಾರಣವಾಗಿದೆ ಎಂದು ತಿಳಿಸಿದರು.

ಮಾಧ್ಯಮ ಸಂವಹನದ ವೇಳೆ ಪೂಜಾ ಮಹೋತ್ಸವ ಸದಸ್ಯೆ ನೀಲಾಂಜನ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon