ಬೆಂಗಳೂರು: ಬುಧವಾರ ಬೆಳಗಿನ ಜಾವ ಸಂಭವಿಸಿದ ಅನಿರೀಕ್ಷಿತ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಕಚೇರಿಯ ಕೆಲ ಕಡತಗಳು, ಕಂಪ್ಯೂಟರ್ ಗಳು ಸುಟ್ಟು ಕರಕಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೆ ಸಿಎಂ ಡಿ.ಕೆ ಶಿವಕುಮಾರ್ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಆಡಳಿತ ಕಚೇರಿ, ಮಾರುಕಟ್ಟೆ ಸುತ್ತಮುತ್ತಲಿನ ಕಟ್ಟಡಗಳ ಪರಿಶೀಲನೆ ನಡೆಸಿದ್ದರು. ಭೇಟಿಯ ಬೆನ್ನಲ್ಲೇ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಅವಘಡ ಸಂಭವಿಸಿರುವುದು ಉಲ್ಲೇಖನೀಯವಾಗಿದೆ. ಈಗ ಸಂಭವಿಸುವ ದುರ್ಘಟನೆಯ ಪರಿಣಾಮ ಕಚೇರಿಯ ಎರಡು ವರ್ಕ್‌ಸ್ಟೇಷನ್ ಹಾಗೂ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು, ಅಲ್ಮೆರಾ, ಕಡತಗಳು ಇದರೊಂದಿಗೆ ಅಲ್ಲಿದ್ದ ಕೆಲವು ಪುಸ್ತಕಗಳು ಹಾಗೂ ಇತರ ಸಾಮಗ್ರಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಮಾಹಿತಿ ದೊರೆತಿದೆ.
ಒಟ್ಟಾರೆ ಕಟ್ಟಡವು ಸುಮಾರು 35 ವರ್ಷ ಹಳೆಯದಾಗಿದ್ದು, ವೈರಿಂಗ್ ಕೂಡ ಹಳೆಯದೇ ಆಗಿರುವುದರಿಂದ ಈ ಆಘಾತಕಾರಿ ಅವಘಡ ಸಂಭವಿಸಿದೆ. ಘಟನೆ ಸಂಭವಿಸಿದ ತಕ್ಷಣವೇ ಎಚ್ಚೆತ್ತುಕೊಂಡ ಸಿಬ್ಬಂದಿಗಳು ಯಶವಂತಪುರ ಮಾರುಕಟ್ಟೆ ಯಾರ್ಡ್‌ನಲ್ಲಿರುವ ಅಗ್ನಿಶಾಮಕ ದಳಕ್ಕೆ ತಕ್ಷಣವೇ ಮಾಹಿತಿ ನೀಡಿ ಹೆಚ್ಚಿನ ಹಾನಿ ಸಂಭವಿಸದಂತೆ ತಡೆದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಮಯೋಚಿತ ಪ್ರಯತ್ನದಿಂದ ಬೆಂಕಿ ನಂದಿಸಲಾಗಿದ್ದು, ದೊಡ್ಡ ಮಟ್ಟದ ಅನಾಹುತ ತಪ್ಪಿಸಲಾಗಿದೆ. ಎಪಿಎಂಸಿ ಎಲೆಕ್ಟ್ರಿಕಲ್ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಚೇರಿಯಲ್ಲಿ ದಟ್ಟವಾದ ಹೊಗೆ ಆವರಿಸಿದ್ದರ ಪರಿಣಾಮ ಗೋಡೆಗಳು ಹಾಗೂ ಸೀಲಿಂಗ್‌ಗಳಿಗೆ ಕಪ್ಪಗಿನ ಕಲೆಗಳು ಮೂಡಿರುವುದರಿಂದ, ಕಚೇರಿಯನ್ನು ತಾತ್ಕಾಲಿಕವಾಗಿ ಸುರಕ್ಷಿತ ಕೊಠಡಿಗಳಿಗೆ ಸ್ಥಳಾಂತರಿಸಲಾಗುತ್ತಿದೆ. ವೃತ್ತಿಪರರಿಂದ ಕ್ಲೀನಿಂಗ್ ಕಾರ್ಯಕ್ಕೆ ಆರ್ಡರ್ ಮಾಡಲಾಗಿದ್ದು, ಎಲ್ಲವನ್ನೂ ಸ್ವಚ್ಛಗೊಳಿಸಿ ನಾಳೆಯಿಂದಲೇ ಪೇಂಟಿಂಗ್ ಕೆಲಸಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಈ ತುರ್ತು ಸಂದರ್ಭದಲ್ಲಿ ಸಿಬ್ಬಂದಿ ಯಾವುದೇ ರಜೆ ಪಡೆಯದೆ ಸತತವಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ.
ಈ ಕುರಿತು ಮಾಧ್ಯಮಗಳ ಜೊತೆ ಸಮಿತಿಯ ಕಾರ್ಯದರ್ಶಿ ರಮೇಶ್ ವಿ ಮಾತನಾಡಿ, ಶಾರ್ಟ್ ಸರ್ಕ್ಯೂಟ್‌ನಿಂದ ಯಾವುದೇ ಪ್ರಮುಖ ಹಾಗೂ ಮಹತ್ವದ ದಾಖಲೆಗಳಿಗೆ ಹಾನಿಯಾಗಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಒಳಗೆ ಬಂದಿರುವುದು ಕಂಡು ಬಂದಿಲ್ಲ. ನಿಖರವಾಗಿ ಬುಧವಾರ ಬೆಳಿಗ್ಗೆ 4:40 ಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸ್ಪಾರ್ಕ್ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.














