ಕೆಎಸ್‌ಪಿಸಿಬಿ ಸುಧಾರಣೆಗೆ ಹಲವು ದಿಟ್ಟ ಕ್ರಮ ತೆಗೆದುಕೊಳ್ಳುತ್ತೇನೆ: ಬಿ. ಶಿವಣ್ಣ

WhatsApp
Telegram
Facebook
Twitter
LinkedIn

ಬೆಂಗಳೂರು: ಕೆಎಸ್‌ಪಿಸಿಬಿ ಸುಧಾರಣೆಗೆ ಹಲವು ದಿಟ್ಟ ಕ್ರಮ ತೆಗೆದುಕೊಳ್ಳುತ್ತೇನೆ. ನದಿಗಳು, ಕೆರೆಗಳಿಗೆ ಕಲುಷಿತ ನೀರು ಹರಿಯುವುದು, ಪೀಣ್ಯ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ನಿರ್ವಹಣೆ, ವಾಯುಮಾಲಿನ್ಯ ನಿಯಂತ್ರಣದ ಕುರಿತು ವಿಶೇಷ ಗಮನಹರಿಸುತ್ತೇನೆ ಎಂದು ನೂತನ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಆನೇಕಲ್ ಕ್ಷೇತ್ರದ ಶಾಸಕ ಬಿ. ಶಿವಣ್ಣ ತಿಳಿಸಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಮೊದಲೆರಡು ದಿನದ ಕಾರ್ಯಚಟುವಟಿಕೆ ನಿರ್ವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ನೂತನ ಅಧ್ಯಕ್ಷನಾಗಿ ಗುರುವಾರ ಅಧಿಕಾರ ಸ್ವೀಕರಿಸಿದ್ದೇನೆ. ಮಂಡಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಪ್ತರು, ಮುಖಂಡರು, ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಬಂದು ಅಭಿನಂದನೆ ಸಲ್ಲಿಸಿದ್ದಾರೆ. ಅವರ ನಿರೀಕ್ಷೆಗಳು ಮತ್ತು ಅಶೋತ್ತರಗಳಿಗೆ ತಕ್ಕಂತೆ ಹೊಸ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎನ್ನುವ ವಿಶ್ವಾಸವಿದೆ ಎಂದರು.

ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳು, ಜಲ ಮಂಡಳಿ, ಬಿಡಿಎ ಅಧಿಕಾರಿಗಳ ಸಭೆ ನಡೆಸಲು ನಿರ್ಧರಿಸಿದ್ದೇನೆ. ನಗರದ ಜಲಮೂಲಗಳು ಹಾಗೂ ವಾಯು ಗುಣಮಟ್ಟ ಸುಧಾರಣೆಗೆ ಆದ್ಯತೆ ಮೇಲೆ ಕೆಲಸ ಮಾಡುತ್ತೇನೆ. ಹಸಿರು ಸಾರಿಗೆ, ವಿದ್ಯುತ್ ಚಾಲಿತ ವಾಹನ ಬಳಕೆಗೆ ಆದ್ಯತೆ ನೀಡುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ಸಾರ್ವಜನಿಕರು ಹಾಗೂ ಉದ್ದಿಮೆಗಳು ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ. ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸುತ್ತೇನೆ ಎಂದು ಹೇಳಿದರು.

ತ್ಯಾಜ್ಯ ನೀರು ನಿರ್ವಹಣೆ ಸರಿಯಾಗಿ ಆಗಬೇಕಿದೆ. ಎಸ್‌ಟಿಪಿಗಳನ್ನು ಉನ್ನತೀಕರಿಸಬೇಕಿದೆ. ನೀರು, ವಾಯುಮಾಲಿನ್ಯ ತಡೆಗೆ ಮಂಡಳಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇನ್ನಷ್ಟು ಕಠಿಣ ಕಾನೂನುಗಳು ಜಾರಿಯಾಗಬೇಕಿದೆ. ನದಿ ಮೇಲ್ವಿಚಾರಣಾ ವ್ಯವಸ್ಥೆ (ಆರ್‌ಎಂಎಸ್) ಸ್ಥಾಪನೆ ಆಗಬೇಕಿದೆ. ಮಾಲಿನ್ಯ ತಡೆಗೆ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕಿದೆ. ಈ ನಿಟ್ಟಿನಲ್ಲಿ ಪೊಲೀಸ್ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮಂಡಳಿ ಕಾರ್ಯನಿರ್ವಹಿಸಲು ಮುಂದಾಗಲಿದೆ ಎಂದು ತಿಳಿಸಿದರು.

ಖಾಲಿ ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಅತಿ ಶೀಘ್ರದಲ್ಲಿ ಚಾಲನೆ ದೊರೆಯಲಿದೆ. ಅವಧಿ ಮೀರಿದ ವಾಹನಗಳ ಬಳಕೆ ನಿಷೇಧ ಹಾಗೂ ವಿದ್ಯುತ್‌ಚಾಲಿತ ವಾಹನಗಳ ಬಳಕೆ ಉತ್ತೇಜನ ಸೇರಿ ಹಲವು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಮಂಡಳಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಕೇರಳ ಮತ್ತು ಆಂಧ್ರಪ್ರದೇಶ, ನಮ್ಮ ಗಡಿ ಭಾಗದ ಜಿಲ್ಲೆಗಳಲ್ಲಿ ಅನಧಿಕೃತವಾಗಿ ವೈದ್ಯಕೀಯ ತಾಜ್ಯವನ್ನು ಸುರಿಯುವುದಕ್ಕೆ ಇನ್ನಷ್ಟು ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಿದ್ದೇನೆ ಎಂದು ಬಿ. ಶಿವಣ್ಣ ಮಾಹಿತಿ ನೀಡಿದರು.

 

 

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon