ಬೆಂಗಳೂರು: ಸರಳ ಯೋಗ ವೇದಿಕೆಯಲ್ಲಿ ನವರಾತ್ರಿಯ ಏಳನೇ ದಿನದಂದು “ಯೋಗ ಸಾಧನಾ ಪ್ರೇರಣಾ” ದಿನವನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಶೇಷಾದ್ರಿಪುರದ ಖಾಸಗಿ ಹೋಟೆಲ್ ನಲ್ಲಿ ಆಚರಿಸಲಾಯಿತು. ಈ ವಿಶೇಷ ಕಾರ್ಯಕ್ರಮದಲ್ಲಿ ವಿದೇಶಿ ಯೋಗಪಟುಗಳು ಹಾಗೂ ಗಣ್ಯರು ಪಾಲ್ಗೊಂಡು ಯೋಗದ ಮಹತ್ವವನ್ನು ಸಾರಿದರು.
ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಆಗಮಿಸಿದ್ದ ವಿಶ್ವಖ್ಯಾತಿಯ ಟ್ರೈಯೋಗ ಸಂಸ್ಥೆಯ ಸ್ಥಾಪಕರಾದ ಪೂಜ್ಯ ಯೋಗಿನಿ ಕಾಳಿಜಿ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಇದು ಭಾರತಕ್ಕೆ ನನ್ನ ನಲವತ್ತೊಂದನೇ ಭೇಟಿಯಾಗಿದೆ. ಬೆಂಗಳೂರಿನಲ್ಲಿ ಯೋಗ ಪ್ರಸಾರ ಮಾಡುತ್ತಿರುವ ಬೃಹತ್ ಕೆಲಸ ಸರಳ ಯೋಗ ವೇದಿಕೆ ಮಾಡುತ್ತಿದೆ. ಅಂತರರಾಷ್ಟ್ರೀಯ ಯೋಗ ದಿನದ ಘೋಷಣೆಯ ನಂತರ ವಿಶ್ವದಾದ್ಯಂತ ಯೋಗಕ್ಕೆ ಸಿಕ್ಕಿರುವ ಸ್ಪಂದನೆ ಅಭೂತಪೂರ್ವವಾಗಿದ್ದು, ಅಮೆರಿಕ, ಯುರೋಪ್ ಹಾಗೂ ದಕ್ಷಿಣ ಅಮೆರಿಕದ ದೇಶಗಳಲ್ಲಿ ಯೋಗ ಜನಪ್ರಿಯಗೊಳ್ಳುತ್ತಿರುವುದು ಸಂತಸದ ವಿಷಯ ಎಂದು ಅಭಿಪ್ರಾಯಪಟ್ಟರು.
ವೇದವ್ಯಾಸ ಯೋಗ ಪ್ರತಿಷ್ಠಾನ ಹಾಗೂ ವ್ಯಾಸ ಭಾರತೀ ತ್ರೈಯೋಗ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಕೆ. ರಾಘವೇಂದ್ರ ಪೈ ಅವರು ಕಾರ್ಯಕ್ರಮದ ವಿಶೇಷತೆಯ ಕುರಿತು ಮಾತನಾಡಿ, ನಮ್ಮ ಸಂಸ್ಕೃತಿಯ ವಸುಧೈವ ಕುಟುಂಬಕಮ್ ಪರಿಕಲ್ಪನೆಯಂತೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಸಂದೇಶವನ್ನು ಯೋಗ ಸಾರುತ್ತಿದೆ. 1980ರಿಂದ ಪೂಜ್ಯ ಕಾಳಿಜಿಯವರ ನೇತೃತ್ವದಲ್ಲಿ ಜಗತ್ತಿನ ನಲವತ್ತಾರು ದೇಶಗಳಲ್ಲಿ ಯೋಗ ಪ್ರಸಾರವಾಗುತ್ತಿದ್ದು, ಪ್ರಸ್ತುತ ಬೆಂಗಳೂರಿನ ಸರಳ ಯೋಗ ವೇದಿಕೆಯು ಮೂವತ್ತು ಕೇಂದ್ರಗಳ ಮೂಲಕ ಯೋಗದ ಪ್ರೇರಣೆಯನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಪತ್ರಕರ್ತ ಹಾಗೂ ಹಿರಿಯ ಲೇಖಕರಾದ ಮಲ್ಲಪ್ಪ ಶಂಕರ್ ಸುಲ್ದಾಳ್ ಅವರು ಮಾತನಾಡಿ, ದಶಕಗಳ ಹಿಂದೆ ಆರೋಗ್ಯ ಸುಧಾರಣೆಗಾಗಿ ಆರಂಭಿಸಿದ ಯೋಗ ಸಾಧನೆ ಇಂದು ಬೃಹತ್ ಹೆಮ್ಮರವಾಗಿ ಬೆಳೆದಿದೆ. ಯೋಗಾಚಾರ್ಯ ಡಾ. ಎ. ಆರ್ ಗೋವಿಂದ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಈ ಯೋಗ ಶಿಕ್ಷಣ ಕೇಂದ್ರ ಇಂದು ನೂರಕ್ಕೂ ಹೆಚ್ಚು ಶಿಕ್ಷಕರು ಹಾಗೂ ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ, ಆಸ್ಟ್ರಿಯಾ, ರಷ್ಯಾ ಸೇರಿದಂತೆ ವಿವಿಧ ದೇಶಗಳ ವಿದೇಶಿ ಪ್ರತಿನಿಧಿಗಳನ್ನು ಆಕರ್ಷಿಸುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದೇಶಿ ಸಾಧಕರಾದ ಏಕಟೇರಿನಾ ಇವ್ಚೆಂಕೋ, ಋಷಿ ದೇವ್, ಮಾತಂಗ ಹಾಗೂ ಡಾ. ಅನಂದಾ ಸೇರಿದಂತೆ ಸರಳ ಯೋಗ ವೇದಿಕೆಯ ಅಧ್ಯಕ್ಷ ಎಂ. ಕೇಶವರಾಜ್, ಹಿರಿಯ ಉಪಾಧ್ಯಕ್ಷ ಬಿ. ಆರ್. ಸತ್ಯನಾರಾಯಣ್, ಪದಾಧಿಕಾರಿಗಳಾದ ಜಯಪ್ರಕಾಶ್ ಎ.ಜಿ.ಕೆ, ಡಾ. ಕಲಾವತಿ ಹೆಚ್. ಆರ್, ರಮಾಭಟ್ ಸೇರಿದಂತೆ ಹಲವಾರು ಯೋಗಪಟುಗಳು ಉಪಸ್ಥಿತರಿದ್ದರು.














