ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ನರೇಗಾ (ವಿಬಿ ಜಿ ರಾಮ್ ಜಿ) ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ವಿವಿಧ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. 2008ರಿಂದಲೂ ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ತಂತ್ರಾಂಶಗಳ ನಿರ್ವಹಣೆಯ ಕೆಲಸ ಮಾಡುತ್ತಿರುವ ನೌಕರರಿಗೆ ಇಲ್ಲಿಯವರೆಗೆ ಸೇವಾ ಭದ್ರತೆ ದೊರೆತಿಲ್ಲ. ಆದ್ದರಿಂದ ನೂತನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಮುಂದುವರಿಕೆಗೆ ತಕ್ಷಣ ಸರ್ಕಾರ ಆದೇಶ ಹೊರಡಿಸಬೇಕು ಹಾಗೂ ಅವರ ಸುದೀರ್ಘ ಸೇವೆಯನ್ನು ಪರಿಗಣಿಸಿ ಹುದ್ದೆಗಳನ್ನು ತಕ್ಷಣವೇ ಕಾಯಂಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಆರ್ ಮಾತನಾಡಿ, ರಾಜ್ಯದ ಗ್ರಾಮೀಣ ಭಾಗದಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಶಸ್ವಿಯಾಗಲು ಹಗಲಿರುಳು ಶ್ರಮಿಸುತ್ತಿರುವ 3,657ಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿ ಪ್ರಸ್ತುತ ಸೇವಾ ಭದ್ರತೆಯ ವಿಚಾರದಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಈ ಸಿಬ್ಬಂದಿಗೆ ತಕ್ಷಣವೇ ವಿಬಿ ಜೀ ರಾಮ್ ಜಿ ಸಿಬ್ಬಂದಿಗೆ ಒದಗಿಸುವ ಮಾದರಿಯಲ್ಲಿ ಸೇವಾ ಭದ್ರತೆ ನೀಡುವುದು ಅತ್ಯಗತ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
ನೌಕರರಿಗೆ ಕಡ್ಡಾಯವಾಗಿ ಪ್ರತಿ ತಿಂಗಳು ನಿಯಮಿತವಾಗಿ ವೇತನ ಪಾವತಿಸಬೇಕು. ನೌಕರರ ಕುಟುಂಬದ ಹಿತದೃಷ್ಟಿಯಿಂದ ಆರೋಗ್ಯ ವಿಮೆ ಮತ್ತು ಅಪಘಾತ ಪರಿಹಾರ ಸೌಲಭ್ಯವನ್ನು ಒದಗಿಸಬೇಕು ಹಾಗೂ ಪ್ರಸ್ತುತ ಸೇವೆಯಲ್ಲಿರುವ ಎಲ್ಲಾ ಸಿಬ್ಬಂದಿಯ ಮೂಲ ವೇತನಕ್ಕೆ ಶೇಕಡಾ 25ರಷ್ಟು ವೇತನ ಹೆಚ್ಚಳ ಪರಿಷ್ಕರಣೆ ಮಾಡಬೇಕು. ಮುಂದಿನ ದಿನಗಳಲ್ಲಿ ನಡೆಯಲಿರುವ ಆರ್.ಡಿ.ಪಿ.ಆರ್ ನೇಮಕಾತಿಗಳಲ್ಲಿ ನರೇಗಾ ಸಿಬ್ಬಂದಿಯ ಅನುಭವಕ್ಕೆ ಆದ್ಯತೆ ನೀಡಬೇಕು ಎಂದು ನೌಕರರು ಹಕ್ಕೊತ್ತಾಯ ಮಂಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ ಬಾಳಿಕಾಯಿ, ಗ್ರಾಮ ಪಂಚಾಯಿತಿಯಿಂದ ಹಿಡಿದು ಆಯುಕ್ತಾಲಯ ಕಚೇರಿಗಳವರೆಗೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಬಹುತೇಕ ಬೇಡಿಕೆಗಳು ಈಡೇರಬೇಕಿದೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಹಾಗೂ ಕೂಲಿಕಾರರ ಸಂಕಷ್ಟಗಳಿಗೆ ಸ್ಪಂದಿಸಿ, ಸರ್ಕಾರವು ಕೂಡಲೇ ಸೂಕ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ನಮ್ಮ ಆರು ಪ್ರಮುಖ ಬೇಡಿಕೆಗಳನ್ನು ಈಡೇರಿಸಿದರೆ ನಮ್ಮೆಲ್ಲ ಸಿಬ್ಬಂದಿಯ ಬಹುತೇಕ ಬೇಡಿಕೆಗಳು ಈಡೇರಿದಂತಾಗಲಿದೆ. ಗ್ರಾಮೀಣ ಭಾಗದಲ್ಲಿ ಶ್ರಮಿಸುತ್ತಿರುವ ಪ್ರತಿಯೊಬ್ಬ ನೌಕರನಿಗೂ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ ಎಂದರು.
ಪ್ರತಿಭಟನೆಯಲ್ಲಿ ಮತ್ತೊಬ್ಬ ಉಪಾಧ್ಯಕ್ಷರಾದ ಸಾಯಿಲ್ ದಾನ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಎಸ್.ಪಿ., ಖಜಂಚಿ ಅರುಣ್ ಬಿಎಸ್ ನೌಕರರ ಸಂಘದ ಪ್ರಮುಖರಾದ ವಸಿಗೇರಪ್ಪ ಕೆ ಚಾಗನೂರು, ವೇಣುಕುಮಾರ್, ಮಹಾದೇವಸ್ವಾಮಿ, ಅನುರಾಗ್ ಕುಮಾರ್, ಆನಂದ್, ಜಯಪ್ರಕಾಶ್, ಮಧುಸೂದನ್, ಸಚಿನ್, ಸುನೀಲ್ ಇತರರು ಸೇರಿ ಮೂರು ಸಾವಿರಕ್ಕೂ ಅಧಿಕ ನೌಕರರು ಪಾಲ್ಗೊಂಡಿದ್ದರು.














